ಒಂದು ಚಿತ್ರದಲ್ಲಿ ಅಭಿಷೇಕ್ ಬಚ್ಚನ್‌ಗೆ ಹೀರೋಯಿನ್ ಆದವಳು ಮುಂದೊಂದು ದಿನ ಅಮಿತಾಭ್ ಬಚ್ಚನ್‌ಗೂ ಹೀರೋಯಿನ್ ಆಗುವಂತಾದರೆ ಅವಳು ಅಮಿತಾಭ್‌ರನ್ನು ಏನೆಂದು ಕರೆಯಬೇಕು?.... ಮಿಕ್ಕೆಲ್ಲಾ ಕೆಲಸಗಳಂತೆ ಸಿನಿಮಾವನ್ನೂ ಒಂದು ವೃತ್ತಿಯಾಗಿ ಪರಿಗಣಿಸುವಾಗ ಇದೇನೂ ಅಂಥಾ ಗಂಭೀರ ಸಮಸ್ಯೆಯಲ್ಲ ಅಥವಾ ತಲೆತುರಿಸಿಕೊಳ್ಳುವ ಜಿಜ್ಞಾಸೆಯಲ್ಲ. ಆದರೆ ಕನ್ನಡದ ಸ್ಫೂರ್ತಿ ಎಂಬ ನಟೀಮಣಿಗೆ ಇಂಥದೊಂದು ಜಿಜ್ಞಾಸೆ ಶುರುವಾಗಿಬಿಟ್ಟಿದೆಯಂತೆ.
ಈಕೆ ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರದಲ್ಲಿ ಅವರಿಗೆ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಭಿನಯಿಸಲಿ ಅದರಲ್ಲೇನು ಸಮಸ್ಯೆ? ಎಂದು ನೀವು ಕೇಳಬಹುದು. ಅಲ್ಲೇ ಇರೋದು ಮಜಾ..!! ವಿಷಯ ಏನಪ್ಪಾ ಅಂದ್ರೆ ಈ ಹುಡುಗಿ ಈಗಾಗಲೇ ಜಗ್ಗೇಶ್‌ರವರ ಮಗ ಯತಿರಾಜ್ ಜೊತೆಗೂ ನಟಿಸಿದ್ದಾಳಂತೆ. ಈಗ ಅವರ ತಂದೆಗೂ ನಾಯಕಿಯಾಗಬೇಕಾಗಿ ಬಂದಿರುವುದರಿಂದ ''ಅವರನ್ನು ಏನೆಂದು ಕರೀಬೇಕು?'' ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಅವರನ್ನು ಕಾಡಲು ಶುರುವಾಗಿದೆಯಂತೆ.
ಅದನ್ನು ಅವರು ಯತಿರಾಜ್ ಬಳಿಯಲ್ಲಿ ಹೇಳಿಕೊಂಡಾಗ, ''ಅರೆ ಇಸ್ಕಿ..!! ನನಗೂ ಇದು ಹೊಳೀಲೇ ಇಲ್ವಲ್ಲಾ?'' ಎಂಬಂತೆ ಯತಿರಾಜ್ ಈ 'ಗಹನವಾದ' ಸಮಸ್ಯೆಯನ್ನು ತಮ್ಮ ತಾಯಿಯ ಬಳಿ, ಅಂದರೆ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಬಳಿಯಲ್ಲಿ ಪ್ರಸ್ತಾಪಿಸಿದನಂತೆ. ಇದನ್ನು ಕೇಳಿ ಅವರಿಗೆ ನಗು ತಡೆಯಲಾಗಲಿಲ್ಲವಂತೆ..! ಪ್ರಾಯಶಃ ಇಷ್ಟು ಹೊತ್ತಿಗೆ ಈ ಸಮಸ್ಯೆಯ 'ಗಹನತೆಯನ್ನು' ಕಂಡು ನಿಮಗೂ ನಗುಬಂದಿರಬೇಕು..!!
ಇದನ್ನು ಕೇಳಿಸಿಕೊಂಡ ಗಾಂಧಿನಗರದ ಸಿನಿಮಾ ವಾಲ್‌ಪೋಸ್ಟರು ಪಂಚಾಯ್ತಿಕಟ್ಟೆಗೆ ಬಂದು ಕೂತು ಹೀಗೆ ತನ್ನ ಅಭಿಪ್ರಾಯವನ್ನು ಹೇಳಿತು: 'ಕಲಾವಿದರಾದವರಿಗೆ ಪ್ರತಿಯೊಂದು ಚಿತ್ರದ ಪಾತ್ರವೂ ಒಂದೊಂದು ಉಡುಪು ಇದ್ದಂತೆ. ತಾವು ನಿರ್ವಹಿಸುವ ಪಾತ್ರ ತಮ್ಮ ವೃತ್ತಿಯ ಒಂದು ಭಾಗವಷ್ಟೇ. ಪಾತ್ರ ಮುಗಿಯುತ್ತಿದ್ದಂತೆ ಉಡುಪನ್ನು ಬದಲಾಯಿಸುವ ರೀತಿಯಲ್ಲಿ ಬೇರೊಂದು ಪಾತ್ರದೊಳಗೆ ತೂರಿಕೊಳ್ಳಬೇಕೇ ಹೊರತು ಹ್ಯಾಂಗೋವರ್ ಅನ್ನು ಎಲ್ಲ ಸಮಯಗಳಲ್ಲೂ ಹೆಗಲಮೇಲೆ ಹೊತ್ತು ತಿರುಗಲಿಕ್ಕಾಗುವುದೇ?
ಯತಿರಾಜ್ ಜೊತೆಯಲ್ಲಿ ಪಾತ್ರ ಮಾಡಿದ ತಕ್ಷಣ ಅವನನ್ನು 'ಏನೂಂದ್ರೆ' ಅಂತ ಕರೆಯೋಕೆ ಆಗುತ್ತದೆಯೇ ಅಥವಾ ಈಗ ಜಗ್ಗೇಶ್‌ಗೆ ನಾಯಕಿಯಾಗಿ ನಟಿಸುತ್ತಿರುವುದರಿಂದ ಅವರನ್ನು 'ಏನೂಂದ್ರೆ' ಅನ್ನಬೇಕೋ ಅಥವಾ 'ಮಾವಾ' ಅನ್ನಬೇಕೋ ಎಂಬ ಜಿಜ್ಞಾಸೆಗಳನ್ನು ಇಟ್ಟುಕೊಳ್ಳೋಕೆ ಸಾಧ್ಯವೇ? ಸೆಟ್‌ನಲ್ಲಿರುವಷ್ಟೂ ಹೊತ್ತು ಸಿಂಪಲ್ಲಾಗಿ 'ಸಾರ್ ಸಾರ್' ಅಂದುಕೊಂಡಿದ್ದರೆ ಸಾಕು, ಏನೂ ಬಾಧಕವಿಲ್ಲ''.
ವಾಲ್‌ಪೋಸ್ಟರಿನ ಈ ಅಭಿಪ್ರಾಯವನ್ನು ಕೇಳಿದ ಸಿನಿಮಾ ಕಟೌಟು ನಿಂತಲ್ಲಿಂದಲೇ ಸಾಷ್ಟಾಂಗ ನಮಸ್ಕಾರ ಮಾಡಿತಂತೆ..!!