'ಯಾಕ್ಲಾ ಮಗಾ? ಹೊಸ ಸಿಎಮ್ಮು ಕೋಲ್ಗೇಟ್ ಗೌಡ್ರ ಹಂಗೆ ಮುಖಾನ ಸಿನಿಮಾಸ್ಕೋಪ್ ಥರಾ ಇಟ್ಕಳ್ಳಾದು ಬಿಟ್ಟು ಹಳೇ ಸಿಎಮ್ಮು ಥರಾ ಮುಖಾನಾ 35 ಎಂ.ಎಂ.ಗೆ ಸಿಂಡರಿಸ್ಕಂಡಿದೀಯಾ?' ಎಂದು ಕಾನಿಷ್ಕ ಕಲ್ಲೇಶಿಯನ್ನು ಟೂರಿಸ್ಟ್ ತಿಪ್ಪೇಶಿ ಕೆಣಕಿದ.
'ಏನೂಂತ ಹೇಳ್ಲೀ ಮಚ್ಚೀ... ವಿಜಯ ರಾಘವೇಂದ್ರನ ಸಿನಿಮಾಗಳು ಸೋಲಕ್ಕೆ ಅವುಗಳಲ್ಲಿ ದಮ್ಮು ಇಲ್ದಿರಾದೇ ಕಾರಣವಂತೆ...' ಇಡ್ಲಿಯನ್ನು ಚಟ್ನಿಯಲ್ಲಿ ಹದವಾಗಿ ಹೊರಳಾಡಿಸಿ ಬಾಯಲ್ಲಿಟ್ಟುಕೊಂಡೇ ಕಲ್ಲೇಶಿ ಬಾಯಿಬಿಟ್ಟ. 'ಅದ್ರಾಗೇನಲಾ ತಪ್ಪೂ? ಇರೋ ವಿಷ್ಯಾನಾ ಪ್ರಾಮಾಣಿಕವಾಗಿ ಹೇಳವ್ನೆ. ನಿಮ್ಮಜ್ಜಂದೇನು ಗಂಟು ಹೋಯ್ತು?' ತಿಪ್ಪೇಶಿ ತಿರುಗೇಟು ನೀಡಿದ.
'ಮಜಾ ಅಲ್ಲೇ ಐತೆ ಮಚ್ಚೀ. ಪ್ರತಿ ಸಿನಿಮಾ ಬಿಡುಗಡೆ ಆಗೋಕೆ ಮುಂಚೆ 'ಈ ಸಿನಿಮಾ ತುಂಬಾ ಡಿಫರೆಂಟು, ನನಗೆ ಇದುವರೆಗೂ ಸಿಕ್ಕದಿದ್ದ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ, ಇದಕ್ಕಾಗಿ ಸಕತ್ತು ಹೋಂವರ್ಕ್ ಮಾಡಿಕೊಂಡೆ, ಲಂಗು-ಲಸ್ಕು....' ಅಂತೆಲ್ಲಾ ವಾಹಿನಿ ವೀಕ್ಷಕರಿಗೆ, ಪತ್ರಿಕೆಯ ಓದುಗರಿಗೆ ಕಿವೀನಲ್ಲಿ ಹೂಕೋಸು ಮುಡಿಸೋದು; ಬಿಡುಗಡೆಯಾದ ಚಿತ್ರ ಮಕಾಡೆ ಮಲಗ್ತೂ ಅಂದ್ರೆ, 'ನಾನು ಅಭಿನಯಿಸಿದ ಚಿತ್ರದಲ್ಲಿ ದಮ್ ಇರ್ಲಿಲ್ಲ' ಅನ್ನೋದು..... ಜನರೇನು ಬಕರಾಗಳಾ?' ಕಲ್ಲೇಶಿ ಕೆಂಪಾಗಿ ಕೇಳಿದ.
ತಿಪ್ಪೇಶಿ ತನ್ನ ಪೊದೆಮೀಸೆಯ ಮೂಲಕ ಕಾಫಿಯನ್ನು ಸೋಸಿಕೊಂಡು ಹೀರುತ್ತಾ, 'ನೋಡ್ಲಾ ಮಗಾ, ಅದನ್ನೇ 'ಕಾಲಕ್ಕೆ ತಕ್ಕಂತೆ ಮಾತು' ಅನ್ನೋದು; ಚಿತ್ರದ ಬಿಡುಗಡೆಗೆ ಮುಂಚೇನೇ 'ಈ ಚಿತ್ರದಲ್ಲಿ ದಮ್ ಇಲ್ಲ' ಅಂತ ಅನ್ನಕ್ಕಾಗ್ತದಾ? ಹಂಗಂದ್ರೆ ದುಡ್ಡು ಹಾಕಿದ ಪ್ರೊಡ್ಯೂಸರ್ರು ಸುಮ್ಮನೇ ಬಿಟ್ಟಾನಾ? ಆಯಾಯಾ ದೇಶ-ಕಾಲಕ್ಕೆ ತಕ್ಕಂತೆ ವೇಷ-ಭಾಷೆ ಇರ್ತದೆ ಕಣ್ಲಾ; ನೀನಿನ್ನೂ ರಾಗಿ ಬೀಸೋದು ತುಂಬಾ ಇದೆ, ನಡಿ' ಎನ್ನುತ್ತಾ 2 ಪ್ಲೇಟ್ ಇಡ್ಲಿ, ಒಂದು ಕಾಫಿ ಲೆಕ್ಕಕ್ಕೆ ಬರ್ಕಳಿ ಭಟ್ರೇ ಎನ್ನುತ್ತಾ ಕಲ್ಲೇಶಿಯನ್ನು ಸಿಗರೇಟು ಅಂಗಡಿಗೆ ಕರ್ಕೊಂಡು ಹೋದ..!!