'ಕ್ಯಾಶ್ ಪೆಟ್ಟಿಗೆ' ಹಿಡಿಯಬೇಕಿದ್ದ ಕೈ 'ಶ್ರುತಿ ಪೆಟ್ಟಿಗೆ' ಹಿಡಿದಾಗ...
EVENT
ಇದು ಸುಮಾರು ಎಪ್ಪತ್ತರ ದಶಕದ ಮಾತು. ಮುಂಬೈಯಲ್ಲಿ ಬ್ಯಾಂಕ್ ಉದ್ಯೋಗಿಗಳಾಗಿದ್ದ 'ನಾಗರಕಟ್ಟೆ' ಸಹೋದರರನ್ನು ಕಲಾಪ್ರಪಂಚ ಕೈಬೀಸಿ ಕರೆದಿತ್ತು. ಮುಂಬೈ ರಂಗಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ನಾಟಕಗಳನ್ನಾಡುವ ಮೂಲಕ ಕಲೆಯ ಹಸಿವನ್ನು ತೀರಿಸಿಕೊಳ್ಳುತ್ತಿದ್ದ ಈ ಜೋಡಿ ಅಂತಿಮವಾಗಿ ಅಭಿನಯವನ್ನೇ ವೃತ್ತಿಯನ್ನಾಗಿಸಿಕೊಳ್ಳುವ ನಿರ್ಧಾರ ಮಾಡಿದಾಗ, ಅದು ಆ ಕಾಲಕ್ಕೆ ಜೀರ್ಣಿಸಿಕೊಳ್ಳಲಾಗದ ನಿರ್ಧಾರವೆನಿಸಿತ್ತು.
ಏಕೆಂದರೆ ರೆಗ್ಯುಲರ್ ಆಗಿ ತಿಂಗಳು ತಿಂಗಳಿಗೆ ಆದಾಯ ನೀಡುವ ಬ್ಯಾಂಕ್ ಉದ್ಯೋಗವೆಲ್ಲಿ? ಅನಿಶ್ಚಿತತೆಯಲ್ಲೇ ಕೆಲ ಆರಂಭಿಕ ವರ್ಷಗಳನ್ನು ಕಳೆಯಬೇಕಾಗಿ ಬರುವ ಚಿತ್ರರಂಗವೆಲ್ಲಿ? ಆದರೂ ಗಟ್ಟಿ ಮನಸ್ಸು ಮಾಡಿದ ಈ ನಾಗರಕಟ್ಟೆ ಸಹೋದರರನ್ನು ಅರ್ಥಾತ್ ಅನಂತ್‌ನಾಗ್ ಮತ್ತು ಶಂಕರ್‌ನಾಗ್ ಎಂಬ ಈ ನಾಗ್ ಸೋದರರನ್ನು ಕನ್ನಡ ಚಿತ್ರರಂಗ ಎಷ್ಟರಮಟ್ಟಿಗೆ ಬೆಳೆಸಿತು ಎಂಬುದು ನಿಮಗೆ ಗೊತ್ತಿರುವಂಥದ್ದೇ.
ಅದೇ ಥರದವರು ಇಲ್ಲೊಬ್ಬರಿದ್ದಾರೆ. ಅವರು ಹೊಟ್ಟೆಪಾಡಿಗಾಗಿ ಆಯ್ಕೆ ಮಾಡಿಕೊಂಡಿದ್ದು ಬ್ಯಾಂಕಿಂಗ್ ಕ್ಷೇತ್ರವನ್ನು. ಒಂದಷ್ಟು ದಿನ ಅಲ್ಲಿ ಕೆಲಸವನ್ನೂ ನಿರ್ವಹಿಸಿದ್ದಾಯಿತು. ಆದರೆ ಅಂತರಾಳದ ತುಡಿತ ಹೊಟ್ಟೆಪಾಡಿನ ಉದ್ಯೋಗವನ್ನೂ ಓವರ್‌ಟೇಕ್ ಮಾಡಿದಾಗ, ಓಟು ಬಿದ್ದದ್ದು ಅಂತರಾಳದ ತುಡಿತಕ್ಕೇ. ಹೀಗೆ ಈಗ ಸಂಗೀತವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಮಹತ್ವಾಕಾಂಕ್ಷಿಯ ಹೆಸರು ವಿನಯ್‌ಚಂದ್ರ ಅಂತ. ಇವರು ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ಸಂಗೀತದ ಕಡೆಗೆ ಒಲವಿದ್ದಿದ್ದೇನೋ ಸರಿ. ಹಾಗಂತ ಚಿತ್ರರಂಗದ ಪ್ರವೇಶ ಸುಲಭದ ತುತ್ತಾಗಿರಲಿಲ್ಲ. ಹೀಗಾಗಿ ಸಂಗೀತಬ್ರಹ್ಮ ಹಂಸಲೇಖಾರನ್ನು ಪಟ್ಟಾಗಿ ಹಿಡಿದುಕೊಂಡ ವಿನಯ್‌ಚಂದ್ರ ಅವರ ಬಳಿಯಲ್ಲಿ ಎರಡು ವರ್ಷಗಳ ಕಾಲ ಚಿತ್ರಸಂಗೀತದ ಮಟ್ಟುಗಳನ್ನು ಕಲಿತರು. ನಂತರ ಅವರ ಕೈಹಿಡಿದದ್ದು ಸಾಹಿತಿ-ಸಂಗೀತ ನಿರ್ದೇಶಕ ವಿ.ಮನೋಹರ್.
'ದುನಿಯಾ' ಚಿತ್ರದಿಂದ ಮೊದಲ್ಗೊಂಡು ಹತ್ತಕ್ಕೂ ಹೆಚ್ಚಿನ ಚಿತ್ರಗಳಿಗೆ ಮನೋಹರ್ ಜೊತೆಗೂಡಿ ಕೆಲಸ ಮಾಡಿ ಅನುಭವ ದಕ್ಕಿಸಿಕೊಂಡ ವಿನಯ್‌ರಲ್ಲಿ ಸಹಜವಾಗಿ ಸ್ವತಂತ್ರ ಸಂಗೀತ ನಿರ್ದೇಶಕರಾಗುವ ಬಯಕೆ ಚಿಮ್ಮಿತು. ಆಗ 'ನೀ ರಾಣಿ ನಾ ಮಹಾರಾಣಿ' ಎಂಬ ಚಿತ್ರವು ಅವಕಾಶದ ರೂಪದಲ್ಲಿ ಅವರ ಮನೆಯ ಬಾಗಿಲನ್ನು ಬಡಿಯಿತು. ಈಗ 'ಬಾಡಿಗಾರ್ಡ್' ಚಿತ್ರದ ಸರದಿ. ಈ ಚಿತ್ರದ ಹಾಡುಗಳು ಎಲ್ಲರಿಗೂ ಮೆಚ್ಚುಗೆಯಾಗಿರುವುದು ವಿನಯ್‌ಚಂದ್ರರ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ. ಈ ಚಿತ್ರ ಅವರಿಗೆ ಬ್ರೇಕ್ ನೀಡುವಂತಾಗಲಿ ಮತ್ತು ಅವರು ಮಾಡಿದ 'ವೃತ್ತಿ ಬದಲಾವಣೆ'ಯ ನಿರ್ಧಾರವು ತಪ್ಪಾಗಿಲ್ಲ ಎಂಬುದು ಸಾಬೀತಾಗುವಂತಾಗಲಿ.