ಉಡುಪಿ ಹೋಟೆಲ್ ಭಟ್ರು ಸಾಲ ಕೊಡಲ್ಲ ಅಂತ ಹೇಳಿದ್ದಕ್ಕೆ ಕಾನಿಷ್ಕಾ ಕಲ್ಲೇಶಿ ಮತ್ತು ಟೂರಿಸ್ಟ್ ತಿಪ್ಪೇಶಿ ಫುಟ್‌ಪಾತಲ್ಲಿ ಚಿತ್ರಾನ್ನ ತಿನ್ತಾ ಇದ್ರು. ಚಿತ್ರಾನ್ನದಲ್ಲಿ ತರಕಾರಿಯನ್ನು ಹುಡುಕುವ ವಿಫಲ ಪ್ರಯತ್ನ ಮಾಡುತ್ತಿದ್ದ ಕಲ್ಲೇಶಿ ಇದ್ದಕ್ಕಿದ್ದಂತೆ, 'ಆಚಾರ ಹೇಳಕ್ಕೆ, ಬದನೇಕಾಯಿ ತಿನ್ನಕ್ಕೆ... ಇವರ ಮನೆ ಕಾಯ್ವಾಗ' ಎಂದು ಗೊಣಗಲು ಶುರುಮಾಡಿದ. ಅವನ ಗೊಣಗಾಟವನ್ನು ಅರ್ಥಮಾಡಿಕೊಳ್ಳದ ತಿಪ್ಪೇಶಿ, 'ಲೇಯ್ ಮಗಾ, ಈ ಚಿತ್ರಾನ್ನದಲ್ಲಿ ಅನ್ನ-ಉಪ್ಪು-ಹಸಿರು ಮೆಣಸಿನಕಾಯಿ ಬಿಟ್ರೆ ಬೇರೇನೂ ಇಲ್ಲ; ಬದ್ನೇಕಾಯಿ ತಿನ್ನಕ್ಕೆ ಅಂತೀಯಲ್ಲಾ, ಎಲ್ಲೈತಲೇ ಬದ್ನೇಕಾಯಿ?' ಎಂದು ದೊಡ್ಡಣ್ಣನ ಶೈಲಿಯಲ್ಲಿ ಆವಾಜ್ ಹಾಕಿದ.
'ನಾ ಹೇಳಿದ್ದು ಈ ಚಿತ್ರಾನ್ನದ ಬಗ್ಗೆ ಅಲ್ಲ ಮಚ್ಚೀ; ನಮ್ಮ ಚಿತ್ರರಂಗದ ಜನಗಳ ಬಗ್ಗೆ. 'ಮಾಗಡಿ' ಅನ್ನೋ ಸಿನಿಮಾದಲ್ಲಿ ನಟಿಸ್ತಿರೋ ನಮ್ಮ ದೀಪಕ್ ಇಲ್ವಾ? ಪಾಪ, ಅವನಿಗೆ ಒಂದು ಹಿಂದಿ ಸಿನಿಮಾದ ಸಿ.ಡಿ. ತೋರಿಸಿ ಇದನ್ನೇ ಕನ್ನಡದಲ್ಲಿ 'ಖದೀಮರು' ಅಂತ ತೆಗೀತಿದ್ದೀವಿ ಅಂತ್ಹೇಳಿ ಅವರನ್ನ ಹಾಕ್ಕೊಂಡ್ರಂತೆ. ಸ್ವಲ್ಪ ದಿನ ರೀಲು ಸುತ್ತಿದಂತೆ ಮಾಡಿ ಸಿನಿಮಾ ಮುಗೀತು ಅಂದ್ರಂತೆ; ಆಮೇಲೆ ನೋಡಿದ್ರೆ ಅದು ಥಿಯೇಟ್ರಲ್ಲಿ ಬಿಡುಗಡೇನೇ ಆಗ್ಲಿಲ್ವಂತೆ' ಎನ್ನುತ್ತಾ ಕಲ್ಲೇಶಿ 'ಥೂ' ಎಂದು ಉಗಿದ. ಅವನು ಉಗಿದದ್ದು ಚಿತ್ರಾನ್ನದಲ್ಲಿನ ಕಲ್ಲು ಎಂದು ಆಮೇಲೆ ಗೊತ್ತಾಯ್ತು..!!
'ಲೇಯ್ ಮಗಾ, ಅದಕ್ಕೇ ನಾನು ಹೇಳ್ತಾನೇ ಇರ್ತೀನಿ: ನಿನಗೆ ದೇಹಕ್ಕೆ ತಕ್ಕಂತೆ ಮನಸ್ಸು ಬೆಳೆದಿಲ್ಲ ಅಂತ. ಅವರು ಥಿಯೇಟ್ರಲ್ಲಿ ಬಿಡುಗಡೆ ಮಾಡ್ಬೇಕು ಅಂತ ಸಿನಿಮಾ ತೆಗೆಯಲ್ಲ ಕಣ್ಲಾ, ಟಿ.ವಿ.ಗೆ ಮಾರಕ್ಕೇಂತ್ಲೇ ಕಡಿಮೆ ಖರ್ಚಲ್ಲಿ ಸುತ್ತೋದು. ಎಲ್ಲಾ ಹೊಸಬ್ರನ್ನೇ ಹಾಕ್ಕಳ್ತಾರೆ, 20-30 ಲಕ್ಷಕ್ಕೆಲ್ಲಾ ಸಿನಿಮಾ ಮುಗಿಯುತ್ತೆ. ಯಾವುದಾದ್ರೂ ವಾಹಿನಿಯೋರಿಗೆ ತಲೆಸವರಿ 50 ಲಕ್ಷಕ್ಕೆ ಮಾರ್ಕಳ್ತಾರೆ. ಕೂತ ಕೂತಂಗೇ 20 ಲಕ್ಷ ಲಾಭ ಬಂದ್ರೆ ಯಾರಿಗೆ ಬೇಡಾ ಹೇಳು?' ಎಂದು ತಿಪ್ಪೇಶಿ ಅವನಿಗೆ ಸಾಕ್ಷಾತ್ಕಾರ ಮಾಡಿಸುವವನಂತೆ ತಲೆ ಮೇಲೆ ಕೈಯಿಟ್ಟ.
ತಿಪ್ಪೇಶಿ ತಲೆ ಮೇಲೆ ಕೈಯಿಟ್ಟರೆ ಏನೋ ಖರ್ಚು ಕಾದಿದೆ ಎಂಬುದನ್ನು ಅರಿತಿದ್ದ ಕಲ್ಲೇಶಿ ಉಪಾಯವಾಗಿ ಅವನ ಕೈ ಸರಿಸುತ್ತಾ, 'ಲೇ ಮಚ್ಚೀ, ಹಂಗಿದ್ಮೇಲೆ, 'ಟಿ.ವಿ. ಬಂದ್ಬಿಟ್ಟು ಸಿನಿಮಾ ಮಾರ್ಕೆಟ್ ಹಾಳಾಯ್ತು' ಅನ್ನೋದ್ಯಾಕೆ? ಮತ್ತೆ ಮತ್ತೆ ಅದೇ ಟಿ.ವಿ.ನ ಹುಡುಕ್ಕಂಡು ಹೋಗಿ ಸಿನಿಮಾ ಮಾರೋದ್ಯಾಕಲಾ?' ಎಂದು ಪ್ರಶ್ನಿಸಿದ.
ಅದಕ್ಕೆ ತಿಪ್ಪೇಶಿ, 'ನೀನು ಈಗ ದೀಪಕ್ ವಿಷ್ಯ ಹೇಳಿದ್ಯಲ್ಲ ಮಗಾ? ಅವರ 'ಬಾ ಬೇಗ ಚಂದಮಾಮ' ಅನ್ನೋ ಸಿನಿಮಾನೂ ಬಿಡುಗಡೆಯಾಗಿಲ್ಲ. ಹುಡುಕ್ತಾ ಹೋದ್ರೆ ಬಹಳಷ್ಟು ಕಲಾವಿದರ ಬಹಳಷ್ಟು ಸಿನಿಮಾ ಹಿಂಗೇ ಸಿಗುತ್ವೆ. ಇಲ್ಲಿ ನ್ಯಾಯ-ನೀತಿ-ಧರ್ಮ ಅನ್ನೋ ಕಾಲ ಮುಗೀತು; ಸಿಕ್ಕಿದಾಗ ದುಡ್ಡು ಮಾಡಿಕೊಳ್ಳೋನೇ ಜಾಣ. ನಡಿ, ಕ್ಯಾಮೆ ನೋಡಣ' ಎನ್ನುತ್ತಾ ಬೀಡಿ ಹಚ್ಚಿಕೊಂಡ.