ಉಡುಪಿ ಭಟ್ಟರ ಹಳೇ ಸಾಲ ತೀರಿಸಿದ್ದಕ್ಕೆ ಕಾನಿಷ್ಕ ಕಲ್ಲೇಶಿ ಮತ್ತು ಟೂರಿಸ್ಟ್ ತಿಪ್ಪೇಶಿಗೆ ಅವರ ಹೊಟೇಲಿಗೆ ಮತ್ತೆ ಎಂಟ್ರಿ ಸಿಕ್ಕಿತ್ತು. ಎಂದಿನಂತೆ ಒಂದು ಪ್ಲೇಟ್ ಇಡ್ಲಿಗೆ ಅರ್ಧ ಚೊಂಬು ಚಟ್ನಿ ಹಾಕಿಸಿಕೊಂಡು ಜಠರದ ಬಾಧೆಯನ್ನು ನೀಗಿಸಿಕೊಂಡ ಅವರಿಬ್ಬರೂ ಬಿಲ್ ಹಣ ಪಾವತಿಸುವ ಸಂದರ್ಭದಲ್ಲಿ, 'ಭಟ್ರೇ, ತಗಳ್ಳಿ 50 ರೂಪಾಯಿ; ಎರಡು ಪ್ಲೇಟ್ ಇಡ್ಲಿಯ ದುಡ್ಡು ಮುರಿದುಕೊಂಡು ಉಳಿದ ಚಿಲ್ಲರೇನ ಕೊಡಬೇಡಿ. ಅಷ್ಟಕ್ಕೂ ಕಡ್ಲೇ ಮಿಠಾಯಿ ಕೊಡಿ' ಎಂದ ಕಲ್ಲೇಶಿ.
ಕಾಗೆಯ ಕಕ್ಕದ ಮೇಲೆ ಎಂಟಾಣೆ ಬಿದ್ದಿದ್ದರೂ ಸಂಕೋಚಪಡದೆ 'ಅಬ್ಬಾ ಮಹಾಪ್ರಸಾದ' ಎಂದು ಸಮರ್ಥಿಸಿಕೊಂಡು ಕಣ್ಣಿಗೊತ್ತಿಕೊಂಡು ಜೇಬಿಗಿಳಿಸುವ ಕಲ್ಲೇಶಿ ಇಂದು ಚಿಲ್ಲರೆಯ ಬದಲಿಗೆ ಮಿಠಾಯಿಗಳನ್ನು ಪಡೆಯುತ್ತಿರುವುದೇಕೆ ಎಂಬುದೇ ನಿತ್ಯಜ್ಞಾನಿಯಾದ ತಿಪ್ಪೇಶಿಗೆ ಅರ್ಥವಾಗಲಿಲ್ಲ.
'ಲೇಯ್ ಮಚ್ಚೀ, ಚಿಲ್ಲರೆ ಇಸ್ಕೊಂಡಿದ್ರೆ ಮಧ್ಯಾಹ್ನದ ಚಿತ್ರಾನ್ನಕ್ಕಾದ್ರೂ ಆಗ್ತಿತ್ತಲ್ವೇನ್ಲಾ? ಅದು ಬಿಟ್ಟು ಮಿಠಾಯಿ ಯಾಕೆ ತಗಂಡ್ಯಲಾ ಬಡ್ಡೆತ್ತದೇ?' ಎಂದು 'ಕಿರಾತಕ' ಚಿತ್ರದ ಯಶ್ ಶೈಲಿಯಲ್ಲಿ ಕಲ್ಲೇಶಿಯ ತಲೆಗೆ ಮೊಟಕಿದ.
'ಅವೆಲ್ಲಾ ನಿಂಗೆ ಗೊತ್ತಾಗಲ್ಲ ಮಗಾ; ಅದಿಕ್ಕೆ ಬದುಕೋ ದಾರಿ ಅಂತಾರೆ. ಇವತ್ತು ಡೈರೆಕ್ಟ್ರು ಕೋಡ್ಲು ರಾಮಕೃಷ್ಣರನ್ನ ನೋಡಕ್ಕೆ ಅಂತ ಹೋಗ್ತಿದ್ದೀನಿ. ಅದಕ್ಕೇ ಈ ಮಿಠಾಯಿ' ಅಂದ ಕಲ್ಲೇಶಿ ಎಂಬ ಕಲ್ಪನಾವಿಹಾರಿ. ಅದು ತಿಪ್ಪೇಶಿಗೆ ಅರ್ಥವಾಗದ್ದರಿಂದ ಕಲ್ಲೇಶಿ ತಾನೇ ಮಾತು ಮುಂದುವರಿಸಿದ:
'ಲೇಯ್ ಬಡ್ಡೆತ್ತದೇ, ಕೋಡ್ಲು ರಾಮಕೃಷ್ಣ ಗಡ್ಡ ಹೆರ್ಕಂಡ್ರೆ ನೀನ್ಯಾಕಲಾ ಅವರ ಬಾಯಿಗೆ ಮಿಠಾಯಿ ಹಾಕ್ಬೇಕು' ಅಂತ ತಿಪ್ಪೇಶಿ ಹಣೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದ. ಇದನ್ನು ನಿರೀಕ್ಷಿಸಿದ್ದ ಕಲ್ಲೇಶಿ ತಿಪ್ಪೇಶಿಗೆ ತನ್ನ ಲಾಜಿಕ್ಕನ್ನು ಅನಾವರಣಗೊಳಿಸಿದ:
'ನೋಡು ಮಗಾ, ಹಿಂದೆ ಅಕ್ಬರ್-ಬೀರಬಲ್ ಕಾಲದಲ್ಲಿ 'ಗಡ್ಡ ಎಳೆದವನ ಬಾಯಿಗೆ ಮಿಠಾಯಿ ಹಾಕ್ಬೇಕು' ಅಂತ ಬೀರಬಲ್ ಕುಶಲ ಉತ್ತರ ನೀಡಿದ್ದ ಅಲ್ಲವೇ? ಈಗ ಕಾಲ ಬದಲಾಗಿರೋದ್ರಿಂದ ಅದನ್ನೇ ಸ್ವಲ್ಪ ಬದಲಾಯಿಸಿ 'ಗಡ್ಡ ಹೆರೆದುಕೊಂಡವನ ಬಾಯಿಗೆ ಮಿಠಾಯಿ' ಅಂದ್ಕೊಂಡು ಕೋಡ್ಲು ಬಾಯಿಗೆ ಮಿಠಾಯಿ ತಿನ್ಸೋದು. 'ಇದೆಲ್ಲಾ ಯಾಕಪ್ಪಾ?' ಅಂತ ಕೋಡ್ಲು ಆಶ್ಚರ್ಯಚಕಿತರಾಗಿ ಕೇಳ್ತಾರೆ.
ಅದಕ್ಕೆ ನಾನು, 'ಇದೇ ಕೆಲಸ ಮುಂಚೇನೇ ಮಾಡೋದಲ್ವಾ ಸಾರ್? ಈಗ ನೋಡಿ, ನಿಮ್ಮ 'ಮಿಸ್ಟರ್ ಡೂಪ್ಲಿಕೇಟ್' ಚಿತ್ರ ಯಶಸ್ಸಾಗುತ್ತೆ ಅಂತ ಬ್ರಹ್ಮಾಂಡದ ಗುರುಗಳು ಪ್ರಸಾದ ಕೊಟ್ಟಿದ್ದಾರೆ' ಅಂತ ಹೇಳಿ ಅವರಿಗೆ ತಿನ್ನಿಸ್ತೀನಿ' ಎಂದ ಕಲ್ಲೇಶಿ ಹೆಮ್ಮೆಯಿಂದ.
'ಅದ್ಸರಿ, ಅದರಿಂದ ನಿನಗೇನು ಪ್ರಯೋಜನ?' ಎನ್ನುತ್ತಾ ತಿಪ್ಪೇಶಿ ತಲೆ ಕೆರೆದುಕೊಂಡ. 'ಇದರಿಂದ ಖುಷಿಯಾಗೋ ಕೋಡ್ಲು ತಮ್ಮ ಚಿತ್ರಗಳಿಗೆ ನನ್ನನ್ನ ಪಿ.ಆರ್.ಓ. ಆಗಿ ಇಟ್ಕಳ್ತಾರೆ. ಸುದ್ದಿ ಹಬ್ಸೋಕೆ ಇದಕ್ಕಿಂತಾ ಉದ್ಯೋಗ ಬೇಕಾ? ಊಟ ತಿಂಡಿ ಖರ್ಚೆಲ್ಲಾ ಅಲ್ಲೇ ಆಗುತ್ತಲ್ವಾ?' ಎಂದ. ಈ ಮಾತು ಕೇಳಿದ ತಿಪ್ಪೇಶಿಗೆ ಏನೂ ತೋಚದೆ ತನ್ನ ತಲೆಯ ಮೇಲೆ ತಾನೇ ಕೈ ಇಟ್ಕೊಂಡ...!!