ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರ ಇಂದು (ವರಮಹಾಲಕ್ಷ್ಮಿ ಹಬ್ಬದಂದು) ಬಿಡುಗಡೆಯಾಗಬೇಕಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿದೆ. ಅಂದರೆ ಇದೇ ತಿಂಗಳ 19ರಂದು ಚಿತ್ರ ಬಿಡುಗಡೆಯಾಗಲಿದೆ.
ಇದಕ್ಕೂ ಮೊದಲು ಸರಿಸುಮಾರು ಒಂದು ತಿಂಗಳ ಹಿಂದೆ ಚಿತ್ರದ ಬಿಡುಗಡೆಯ ಕುರಿತಾಗಿ ನಿರ್ದೇಶಕ ಪ್ರೇಮ್ ಮಾತನಾಡುತ್ತಾ, 'ಜೋಗಯ್ಯ'ನನ್ನು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು; ವರಮಹಾಲಕ್ಷ್ಮಿ ಹಬ್ಬದಂದು ಚಿತ್ರವು ಬಿಡುಗಡೆಯಾಗಲಿರುವುದರಿಂದ ಆಗಸ್ಟ್ 1ರಿಂದಲೇ ಟಿಕೆಟ್ಟುಗಳನ್ನು ಕೊಡಲಾಗುವುದು ಎಂದು ತಿಳಿಸಿದ್ದರು.
ಇಷ್ಟೇ ಅಲ್ಲ, ಚಿತ್ರದ ಬಿಡುಗಡೆಯ ವೇಳೆಗೆ ಕೆಂಪೇಗೌಡ ರಸ್ತೆಯಲ್ಲಿ ದಟ್ಟಣೆಯಾಗುವುದರಿಂದ ಅಲ್ಲಿನ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದೂ ಸಹ ಪ್ರೇಮ್ ತಿಳಿಸಿದ್ದರು. ಆದರೆ ಆಗಸ್ಟ್ ಮೊದಲ ವಾರ ಕಳೆದರೂ ಅನಿಶ್ಚಿತ ಪರಿಸ್ಥಿತಿಯಿದ್ದುದನ್ನು ಕಂಡ ಅಭಿಮಾನಿಗಳು ಥರಹೇವಾರಿಯ ಅನುಮಾನಗಳನ್ನು ವ್ಯಕ್ತಪಡಿಸಲು ಶುರುಮಾಡಿದ್ದರು.
ಈಗ ಎಲ್ಲಾ ಅನುಮಾನಗಳು, ತೊಡಕುಗಳನ್ನು ಪ್ರೇಮ್ ನಿವಾರಿಸಿದ್ದಾರೆ. ಚಿತ್ರದ 3ಡಿ ಪರಿಣಾಮದ ದೃಶ್ಯಗಳಿಗೆ ಒಂದಷ್ಟು ಕೆಲಸ ಬಾಕಿಯಿದ್ದುದರಿಂದ ಬಿಡುಗಡೆ ತಡವಾಯಿತಂತೆ. ಇದರ ಪರಿಣಾಮವಾಗಿ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯುವುದೂ ತಡವಾಗಿ ಅದು ಚಿತ್ರದ ಬಿಡುಗಡೆಯು ವಿಳಂಬಗೊಳ್ಳಲು ಕಾರಣವಾಯಿತು ಎಂಬುದು ಅವರ ಅಭಿಪ್ರಾಯ.
ಶಿವಣ್ಣನ ನೂರನೇ ಚಿತ್ರ, 3ಡಿ ಪೋಸ್ಟರ್ಗಳನ್ನು ಹೊಂದಿರುವ ಚಿತ್ರ ಎಂಬೆಲ್ಲ ಸಂಭ್ರಮಗಳನ್ನು ತುಂಬಿಕೊಂಡಿದ್ದ ಅಭಿಮಾನಿಗಳು ಈ ಎಲ್ಲಾ ಬೆಳವಣಿಗೆಗಳಿಂದಾಗಿ ಒಂದು ಹಂತದಲ್ಲಿ ಬೇಸರಗೊಂಡಿದ್ದಂತೂ ನಿಜ. ಆದರೆ ಎಲ್ಲ ಅಡಚಣೆಗಳೂ ನಿವಾರಣೆಯಾಗಿವೆ ಎಂಬುದು ಚಿತ್ರತಂಡದ ವಿವರಣೆ.