ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಪ್ರೇಮಿ ಶಿವಶಂಕರ್ ಅವರನ್ನು ನೆನೆಯೋಣ (C.V.Shankar | Kannada | Kannada Movies | Kannada Lyrics)
EVENT
ನೀವು ಕಪ್ಪು-ಬಿಳುಪು ಕಾಲದ ಚಿತ್ರಗಳನ್ನು ನೋಡಿರುವವರಾದರೆ ಅಥವಾ ಆಗಿನ ಹಾಡುಗಳನ್ನು ಈಗಲೂ ಗುನುಗುನಿಸುವವರಾದರೆ 'ನಾ ನೋಡಿ ನಲಿಯುವ ಕಾರವಾರ, ಓ ಕಾರವಾರ ಕಡಲಿನ ತೀರ' ಎಂಬ ಹಾಡನ್ನು ಖಂಡಿತಾ ಮೆಚ್ಚಿಕೊಂಡಿರುತ್ತೀರಿ. 'ಮಹಡಿಮನೆ' ಚಿತ್ರದ ಈ ಹಾಡನ್ನು ಬರೆದವರು ಚಿತ್ರಸಾಹಿತಿ ಮತ್ತು ನಿರ್ದೇಶಕ ಸಿ.ವಿ.ಶಿವಶಂಕರ್.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶಿವಶಂಕರ್ ಎಂದರೆ ಇಂದಿನ ಪೀಳಿಗೆಯವರಿಗೆ ಗೊತ್ತಾಗದಿರಬಹುದು. ಆದರೆ ಒಂದು ಕಾಲಕ್ಕೆ ಕನ್ನಡ ಪ್ರೇಮದ ಮತ್ತು ಕರ್ನಾಟಕದ ಕುರಿತಾದ ಹಾಡುಗಳನ್ನು ಬರೆಸಬೇಕೆಂದಾಗಲೆಲ್ಲಾ ಚಿತ್ರೋದ್ಯಮಿಗಳಿಗೆ ಹೊಳೆಯುತ್ತಿದ್ದ ಹೆಸರು ಇವರದ್ದೇ ಎಂಬುದು ಗಮನಿಸಬೇಕಾದ ಅಂಶ. ಅಷ್ಟರ ಮಟ್ಟಿಗೆ ಶಿವಶಂಕರ್ ಕನ್ನಡ ಪ್ರೇಮಿ.

'ತಾಯಿಯ ಮಡಿಲಲ್ಲಿ' ಚಿತ್ರದ 'ಕನ್ನಡದಾ ರವಿಮೂಡಿ ಬಂದಾ, ಮುನ್ನಡೆಯ ಬೆಳಕನ್ನು ತಂದಾ' ಎಂಬ ಗೀತೆ, 'ತಾಯಿಯ ಕನಸು' ಚಿತ್ರದ 'ನಾಡಚರಿತೆ ನೆನಪಿಸುವ ವೀರ ಗೀತೆಯಾ, ಹಾಡು ನೀನು ಕನ್ನಡಿಗಾ ದೇಶಗೀತೆಯಾ' ಎಂಬ ಗೀತೆ, 'ಕನ್ನಡ ಕುವರ' ಚಿತ್ರದ 'ನಡೆಯೂ ಕನ್ನಡ ನುಡಿಯೂ ಕನ್ನಡ' ಎಂಬ ಗೀತೆ ಹೀಗೆ ಹೆಸರಿಸುತ್ತಾ ಹೋದರೆ ಒಂದೊಂದೂ ಅಪೂರ್ವ ಗೀತೆಗಳೇ.

'ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೇ, ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೇ' ಎಂಬ ಗೀತೆ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತಲ್ಲದೆ ಇಂದಿಗೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಆರ್ಕೇಸ್ಟ್ರಾದವರು ತಪ್ಪದೇ ಹಾಡುವ ಗೀತೆಯಾಗಿದೆ. 'ನಮ್ಮ ಊರು' ಎಂಬ ಚಿತ್ರದ ಮೂಲಕ ನಟ ರಾಜೇಶ್‌ಗೆ ನಾಯಕ ಪಟ್ಟ ಕಟ್ಟಿದವರೂ ಇವರೇ. ತೀರಾ ಒಂದು ದಶಕದ ಹಿಂದೆ 'ಕನ್ನಡ ಕುವರ', 'ಪ್ರೇಮಧಾರೆ' ಎಂಬ ಚಿತ್ರಗಳನ್ನು ಅವರು ನಿರ್ದೇಶಿಸಿದರಾದರೂ ಅವು ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ.

ಮುಂಚಿನಂತೆ ದೇಹದಲ್ಲಿ ಚೈತನ್ಯವಿಲ್ಲದಿದ್ದರೂ ಶಿವಶಂಕರ್ ಅವರ ಮನಸ್ಸಿನ ಉತ್ಸಾಹಕ್ಕೇನೂ ಕಮ್ಮಿಯಾಗಿಲ್ಲ. ಆದರೆ ಚಿತ್ರೋದ್ಯಮಿಗಳ ಅಭಿರುಚಿಯು ಬದಲಾಗಿರುವುದಕ್ಕೆ ಅವರು ಕೊಂಚ ಬೇಸರಗೊಂಡಂತಿದೆ. ಜೊತೆಗೆ ಈಗ ಬರುತ್ತಿರುವ ಚಿತ್ರಗಳಲ್ಲಿ ತಮಗೇನೂ ಕೆಲಸವಿಲ್ಲ ಎಂಬ ವಿಷಾದದ ಛಾಯೆಯೂ ಅವರನ್ನು ಆವರಿಸಿಕೊಂಡಿದೆ. ಹೀಗಾಗಿ ಶಿವಶಂಕರ್ ಇದ್ದುದರಲ್ಲಿ ತೃಪ್ತರು.

ಕನ್ನಡದ ಹಿರಿಮೆ ಗರಿಮೆಯನ್ನು ಹಾಡುಗಳ ಮೂಲಕ ಜಗತ್ತಿಗೆ ತಿಳಿಸಿಕೊಟ್ಟ ಶಿವಶಂಕರ್ ಅವರಿಗೆ ಒಂದು ನಮಸ್ಕಾರವನ್ನು ಹೇಳೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ