ಅವಳ ಶೀಲಹರಣಕ್ಕೆ ಯತ್ನಿಸಿದ ದುಷ್ಟರಿಗೆ ಸಿಕ್ಕಾಪಟ್ಟೆ ಗುದ್ದು
EVENT
ಸಿನಿಮಾ ಪುಟದಲ್ಲೇಕೆ ಕ್ರೈಂಸ್ಟೋರಿ? ಎಂದು ಗೊಂದಲಗೊಳ್ಳದಿರಿ. ಇದು ನಿಜಸುದ್ದಿಯಲ್ಲ, ಬದಲಿಗೆ 'ಮಾಗಡಿ' ಸಿನಿಮಾದ ದೃಶ್ಯವೊಂದಕ್ಕೆ ಚಿತ್ರೀಕರಿಸಲಾದ ಸನ್ನಿವೇಶ. ಅಮಾಯಕಳಾದ ಹುಡುಗಿಯೊಬ್ಬಳನ್ನು ದುಷ್ಕರ್ಮಿಗಳು ಎತ್ತಿಕೊಂಡು ಬಂದು ಅವಳ ಶೀಲಹರಣ ಮಾಡಲು ಯತ್ನಿಸುವಾಗ ಆಪದ್ಬಾಂಧವನಂತೆ ಅಲ್ಲಿಗೆ ಆಗಮಿಸುವ ನಾಯಕ ದೀಪಕ್ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿ ಹುಡುಗಿಯನ್ನು ಕಾಪಾಡುವ ದೃಶ್ಯಗಳನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ 'ಮೆಜೆಸ್ಟಿಕ್' ಚಿತ್ರದಲ್ಲಿ ನಾಯಕ ಪಾತ್ರವನ್ನು ನೀಡಿ ಅವರ ವೃತ್ತಿ ಜೀವನಕ್ಕೊಂದು ಭದ್ರವಾದ ನೆಲೆ ಸಿಗಲು ಕಾರಣಕರ್ತರಾದ ಭಾ.ಮಾ.ಹರೀಶ್ 'ಮಾಗಡಿ' ಚಿತ್ರದ ನಿರ್ಮಾಪಕರು. 'ಬಾ ಬೇಗ ಚಂದಮಾಮ', 'ಖದೀಮರು', 'ಶಿಷ್ಯ' ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಚಂದನವನದಲ್ಲಿ ಒಂದು ಭದ್ರವಾದ ನೆಲೆಯನ್ನು ಕಂಡುಕೊಳ್ಳಲು ಹವಣಿಸುತ್ತಿರುವ ದೀಪಕ್‌ಗೆ ಈ ಚಿತ್ರ ಬ್ರೇಕ್ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಹಾವಭಾವದಲ್ಲಿ ಶಂಕರ್‌ನಾಗ್‌ರನ್ನು ನೆನಪಿಸುವ ದೀಪಕ್‌ಗೆ ಮತ್ತು ಅವರ ಅಭಿಮಾನಿಗಳಿಗೆ ಈ ಚಿತ್ರದ ಯಶಸ್ಸು ಅನಿವಾರ್ಯವಾಗಿದೆ ಎಂಬುದಂತೂ ಸತ್ಯ.
ಬಿ.ಎಂ.ದಿವಾಕರ್ ಈ ಚಿತ್ರದ ಸಹ-ನಿರ್ಮಾಪಕರು. ಕೆ.ಸುರೇಶ್ ಗೋಸ್ವಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆಯೂ ಇವರದ್ದೇ ಅಂತೆ. ರಮೇಶ್ ಛಾಯಾಗ್ರಹಣ, ರಾಜೇಶ್ ರಾಮನಾಥ್ ಸಂಗೀತ, ಉಮಾಶಂಕರ್ ಮತ್ತು ಜಗದೀಶ್ ಸಹನಿರ್ದೇಶನ, ಎನ್.ಎಂ.ವಿಶ್ವ ಸಂಕಲನ ಚಿತ್ರಕ್ಕಿದೆ.
ಚಿತ್ರದ ಉಳಿದ ತಾರಾಬಳಗದಲ್ಲಿ ಮಹೇಶ್, ಗೋಪಿ, ರವಿ, ರಂಗತೇಜ, ರಮೇಶ್ ಪಂಡಿತ್, ಜಯಶ್ರೀ ಕೃಷ್ಣ, ಮೈಸೂರು ಮಲ್ಲೇಶ್, ಉಯ್ಯಾಲೆ ಶಿಲ್ಪಾ ಮೊದಲಾದವರಿದ್ದಾರೆ. ಪತ್ರಕರ್ತ ಲಿಂಗೇನಹಳ್ಳಿ ಸುರೇಶ್ಚಂದ್ರರಿಗೆ ಈ ಚಿತ್ರದಲ್ಲೊಂದು ಗಮನಾರ್ಹವಾದ ಪಾತ್ರವಿದೆಯಂತೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚೆಲುವಿನ ಚಿತ್ತಾರ' ಚಿತ್ರದಲ್ಲಿನ ಪಾತ್ರದ ರೇಂಜ್‌ಗೆ ಸರಿಸಮವಾಗಿರುವ ಪಾತ್ರವಿದು ಎಂಬುದು ಚಿತ್ರತಂಡ ಅಭಿಪ್ರಾಯ. 'ಮಾಗಡಿ' ಚಿತ್ರಕ್ಕೆ ಯಶವನ್ನು ಕೋರೋಣ.