ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ನಂಜುಂಡಿ ಕಲ್ಯಾಣ' ಚಿತ್ರ ಯಶಸ್ಸು ಕಂಡಿದ್ದೇ ತಡ, ಅವರಿಗೆ ಜೋಡಿಯಾಗಿ ನಟಿಸಿದ್ದ ಮಾಲಾಶ್ರೀ ಅಭಿನಯದ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಿಡುಗಡೆ ಕಂಡಿದ್ದೇ ಅಲ್ಲದೇ, ಮಾಲಾಶ್ರೀ ಒಂದಷ್ಟು ಕಾಲ ಕನ್ನಡ ಚಿತ್ರರಂಗವನ್ನೇ ಆಳಿಬಿಟ್ಟರು. 'ಗಜಪತಿ ಗರ್ವಭಂಗ', 'ಪೊಲೀಸನ ಹೆಂಡತಿ', 'ಮೃತ್ಯುಂಜಯ', 'ಹೃದಯ ಹಾಡಿತು', 'ರಾಮಾಚಾರಿ', 'ರಾಣಿ ಮಹಾರಾಣಿ', 'ಹಲೋ ಸಿಸ್ಟರ್', 'ಮುತ್ತಿನಂಥಾ ಹೆಂಡತಿ' 'ಎಸ್.ಪಿ.ಭಾರ್ಗವಿ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಮಾಲಾಶ್ರೀ ಮಿಂಚಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಈಗ ಕಾಲಚಕ್ರ ಒಂದು ಸುತ್ತು ಸುತ್ತಿದೆ. ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬ ಮಾತಿನಂತೆ ಲೇಡಿ ಬ್ರೂಸ್ಲಿ ಎಂದೇ ಹೆಸರಾಗಿರುವ ಆಯೆಷಾ ಅಭಿನಯದ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿದ್ದು, ಮಾಲಾಶ್ರೀ ನಂತರದ ಸ್ಥಾನವನ್ನು ಈಕೆ ಆಕ್ರಮಿಸಿಕೊಳ್ಳಲಿದ್ದಾರೆಯೇ ಎಂಬ ಪುಳಕ ಅವರ ಅಭಿಮಾನಿಗಳಲ್ಲಿ ಮೂಡಿದೆ.
ಥ್ರಿಲ್ಲರ್ ಮಂಜು ನಿರ್ದೇಶನದ 'ಜಯಹೇ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ಈಕೆ ಈಗಾಗಲೇ 'ಚೆನ್ನಮ್ಮ ಐಪಿಎಸ್', 'ಓಬವ್ವ' ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲದರಲ್ಲೂ ಈಕೆಯದು ವೀರಾವೇಶದ ಪಾತ್ರಗಳೇ ಎಂಬುದು ಗಮನಾರ್ಹ ಸಂಗತಿ. ಈ ಸಾಲಿಗೆ ಮತ್ತೊಂದು ಸೇರ್ಪಡೆ 'ಬೇಟೆ'.
ಹೆಸರೇ ಸೂಚಿಸುವಂತೆ ದುಷ್ಟರನ್ನು ಶಿಕ್ಷಿಸುವ ಶಿಷ್ಟರನ್ನು ರಕ್ಷಿಸುವ ಕಥೆಯುಳ್ಳ ಈ ಚಿತ್ರದಲ್ಲಿ ಆಯೆಷಾರೊಂದಿಗೆ ಅಕ್ಷಯ್, ಆಲಿಷಾ ಮೊದಲಾದವರು ನಟಿಸಿದ್ದಾರೆ. ಇನ್ನುಳಿದಂತೆ ಅನಂತ್‌ನಾಗ್, ಹರೀಶ್ ರೈ, ಆದಿ ಲೋಕೇಶ್ ಮೊದಲಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಡಿಟರ್ ಶ್ರೀನಿವಾಸ್ ನಿರ್ಮಾಣದ ಈ ಚಿತ್ರವನ್ನು ಶ್ರೀನಿವಾಸ್ ಕೌಶಿಕ್ ನಿರ್ದೇಶಿಸಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆಯೂ ಇವರದ್ದೇ.