'ಬಿಸಿಲು ಬೆಳದಿಂಗಳು', 'ಯುಗಾದಿ' ಇವೇ ಮೊದಲಾದ ಚಿತ್ರಗಳನ್ನು ನಿರ್ಮಿಸಿದ ಡಿ.ಕೆ.ರಾಮಕೃಷ್ಣ ಉರುಫ್ ಪ್ರವೀಣ್ ಕುಮಾರ್ ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಿಸುತ್ತಿರುವ 'ಒನಕೆ ಓಬವ್ವ' ಚಿತ್ರದ ರೀರೆಕಾರ್ಡಿಂಗ್ ಕಾರ್ಯ ಸಂಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಚಿತ್ರದ ಪ್ರಥಮ ಪ್ರತಿ ಹೊರಬರಲಿದೆ ಎಂದು ತಿಳಿದುಬಂದಿದೆ.
'ಜಯಹೇ', 'ಚೆನ್ನಮ್ಮ ಐ.ಪಿ.ಎಸ್', 'ಬೇಟೆ' ಮೊದಲಾದ ಚಿತ್ರಗಳ ಮೂಲಕ ಗಾಂಧಿನಗರದಲ್ಲಿ 'ಲೇಡಿ ಬ್ರೂಸ್ಲಿ' ಎಂದೇ ಹೆಸರಾಗಿರುವ ಆಯೆಷಾ ಈ ಚಿತ್ರದ ನಾಯಕಿ ಮತ್ತು ದೀಪಕ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಂಡು-ಪೋಕರಿಗಳನ್ನು ವೀರಾವೇಶದಿಂದ ಸದೆಬಡಿಯುವ ಆಧುನಿಕ ಓಬವ್ವಳಾಗಿ ಆಯೆಷಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.
ಓಬವ್ವ ಎಂದ ಕೂಡಲೇ ಚಿತ್ರದುರ್ಗವು ಸಹಜವಾಗಿಯೇ ನೆನಪಿಗೆ ಬರುತ್ತದೆ. ಮದಕರಿ ನಾಯಕರ ಕಾಲದಲ್ಲಿದ್ದ ಒನಕೆ ಓಬವ್ವ ತನ್ನ ಸಮಯಸ್ಫೂರ್ತಿಯಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಕಥೆಯನ್ನು ನಾವೆಲ್ಲಾ ಇತಿಹಾಸದ ಪಾಠಗಳಲ್ಲಿ ಕೇಳಿದ್ದೇವೆ. ಪುಟ್ಟಣ್ಣ ಕಣಗಾಲರು ತಮ್ಮ 'ನಾಗರಹಾವು' ಚಿತ್ರದಲ್ಲಿ ಓಬವ್ವನ ಸಾಹಸವನ್ನು ಹಾಡೊಂದರಲ್ಲಿ ಕಟ್ಟಿಕೊಟ್ಟಿದ್ದನ್ನು ನಾವೆಲ್ಲ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ 'ಒನಕೆ ಓಬವ್ವ' ಚಿತ್ರದ ಚಿತ್ರೀಕರಣವನ್ನೂ ಚಿತ್ರದುರ್ಗದಲ್ಲೇ ನಡೆಸುತ್ತಿರುವುದು ವಿಶೇಷ.
ಚಿತ್ರದ ಇತರ ತಾರಾಗಣದಲ್ಲಿ ರವಿಶಂಕರ್, ಸ್ವಸ್ತಿಕ್ ಶಂಕರ್, ಶೋಭರಾಜ್, ಪೆಟ್ರೋಲ್ ಪ್ರಸನ್ನ, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ನಿರ್ದೇಶನದ ಹೊಣೆಗಾರಿಕೆ ಹೊತ್ತವರು ಆನಂದ್ ಪಿ.ರಾಜು. ರವಿವರ್ಮ ಮತ್ತು ಕೌರವ ವೆಂಕಟೇಶ್ ಸಾಹಸ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. 'ಒನಕೆ ಓಬವ್ವ'ಳಿಗೆ ಶುಭ ಹಾರೈಸೋಣ.