ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿರಾಟ್‌' ಸಿನಿಮಾಕ್ಕೆ ಮೂರು ನಾಯಕಿಯರು ಯಾಕೆ? (Gossip | Kannada Movies | Virat | Remake)
EVENT
'ಕಾರ್ಯರಹಿತ' ಪತ್ರಕರ್ತನೊಬ್ಬ ಗಾಂಧಿನಗರದಲ್ಲಿ ಅತ್ತಿಂದಿತ್ತ-ಇತ್ತಿಂದತ್ತ ಠಳಾಯಿಸುತ್ತಿದ್ದ. ಆಗಷ್ಟೇ ಮರಿಹಾಕಿದ ಬೆಕ್ಕಿನಂತಿತ್ತು ಅವನು ಓಡಾಡುತ್ತಿದ್ದ ರೀತಿ. ಅವನು ಯಾವುದೋ ಸೆನ್ಸೇಷನಲ್‌ ನ್ಯೂಸ್‌ಗೆ ತಡಕಾಡುತ್ತಿದ್ದಾನೆ ಎಂದರಿತ ಕಾನಿಷ್ಕಾ ಕಲ್ಲೇಶಿ, 'ರ್ರೀ... ಸ್ವಾಮೀ, ಬನ್ರೀ ಇಲ್ಲೀ....' ಅಂತ ಕರೆದು 'ಏನು ವಿಷ್ಯ?' ಎಂಬಂತೆ ಹುಬ್ಬು ಹಾರಿಸಿದ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ನಾಳೆ ನಮ್ಮ ಸಿನಿಮಾ ಸಂಚಿಕೆ ಪ್ರಿಂಟಿಗೆ ಹೋಗ್ಬೇಕು. ಒಂದಾದ್ರೂ ಗಾಸಿಪ್‌/ಸೆನ್ಸೇಷನಲ್‌ ಸುದ್ದಿ ತರದೇ ಕಚೇರಿಗೇ ಬರ್ಬೇಡ ಅಂತ ನಮ್ಮ ನ್ಯೂಸ್‌ ಎಡಿಟರ್ರು ಹೆದರಿಸಿದ್ದಾರೆ; ಇಲ್ಲಿ ನೋಡಿದ್ರೆ ಯಾರೂ ಬಾಯಿಬಿಡ್ತಿಲ್ಲ' ಎಂದು ಆ ಪತ್ರಕರ್ತ ಅಳಲು ತೋಡಿಕೊಂಡ.

ಇದು ನನಗೆ ಎಡಗೈ ಕಿರುಬೆರಳಿನ ಉಗುರಿನ ಕೆಲಸ ಎಂಬಂತೆ ನಕ್ಕ ಕಲ್ಲೇಶಿ, 'ಒಂದು ಆಫ್‌ -ದಿ-ರೆಕಾರ್ಡ್‌ ನ್ಯೂಸ್‌ ಇದೆ. 'ನಂದಿವಾಣಿ' ಪತ್ರಿಕೆಗೋ, 'ಟೈಮ್ಸ್‌ ಆಫ್‌ ಮಂಡ್ಯಾ' ಪತ್ರಿಕೆಗೋ ಕೊಡಾಣಾಂತಿದ್ದೇ...' ಎಂದು ರಾಗವೆಳೆದ. 'ಅಯ್ಯೋ ಹಂಗೆ ಮಾಡ್ಬೇಡಿ; ತಗೊಳ್ಳಿ ಐನೂರು ರೂಪಾಯಿ. ಆ ಸುದ್ದೀನ ನಂಗೇ ಹೇಳಿ' ಅಂತ ಆ ಪತ್ರಕರ್ತ ಕಲ್ಲೇಶಿಯ ಕೈಯನ್ನೇ ಕಾಲೆಂಬಂತೆ ಹಿಡಿದ.

ಐನೂರು ರೂಪಾಯಿಯನ್ನು ಸರಕ್ಕನೇ ಜೇಬಿಗಿಳಿಸಿದ ಕಲ್ಲೇಶಿ, 'ಐವತ್ತರ ದಶಕದಲ್ಲಿ ಬಂದ 'ಅಂಡರ್‌ಟೇಕರ್ ಓವರ್ ದಿ ಬಾಕ್ಸಿಂಗ್‌ ರಿಂಗ್‌' ಅನ್ನೋ ಹೆಸರಿನ ಹಾಲಿವುಡ್‌ ಸಿನಿಮಾನ ಯಾರಿಗೂ ಗೊತ್ತಾಗದಂಗೆ ರಿಮೇಕು ಮಾಡ್ತಿದ್ದಾರೆ; ಸರ್ಕಾರದಿಂದ ಸಬ್ಸಿಡಿ ಹೊಡೆಯೋ ದೃಷ್ಟಿಯಿಂದ ಇದರ ಗುಟ್ಟನ್ನ ಯಾರಿಗೂ ಬಿಟ್ಟುಕೊಟ್ಟಿಲ್ಲ; ಬೇಗ ಈ ಸುದ್ದೀನ ಪ್ರಿಂಟುಮಾಡಿ' ಎಂದು ಹೇಳಿ ಆ ಪತ್ರಕರ್ತನನ್ನು ಅಲ್ಲಿಂದ ಸಾಗಹಾಕಿದ.

ಇದನ್ನೆಲ್ಲಾ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದ ತಿಪ್ಪೇಶಿ, 'ಅಲ್ಲಾ ಮಚ್ಚೀ, ಹಾಲಿವುಡ್‌ ಸಿನಿಮಾನ ರಿಮೇಕ್‌ ಮಾಡ್ತಿರೋ ವಿಷ್ಯಾ ನಿಂಗೆ ಹೆಂಗಲಾ ಗೊತ್ತು?' ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಕ್ಕೆ ಕಲ್ಲೇಶಿ 'ಬದುಕಲು ಕಲಿಯಿರಿ' ಎಂದು ಉಪದೇಶಿಸುವ ಶೈಲಿಯಲ್ಲಿ ಹೀಗೆ ಉತ್ತರಿಸಿದ:

'ನೋಡು ಮಗಾ, ಈಗ ಅವನ ತಲೇಲಿ ಹುಳ ಬಿಟ್ಟಿದ್ದೀನಾ? ಅವನು ಅದನ್ನ ಪೇಪರ್‌‌ನಲ್ಲಿ ಬರೀತಾನೆ. ಅದನ್ನ ನೋಡಿದ ಗಾಂಧಿನಗರದೋರು ಐವತ್ತರ ದಶಕದಲ್ಲಿ ಬಂದ 'ಅಂಡರ್‌ಟೇಕರ್ ಓವರ್ ದಿ ಬಾಕ್ಸಿಂಗ್‌ ರಿಂಗ್‌' ಅನ್ನೋ ಚಿತ್ರಾನ ಹುಡ್ಕಕ್ಕೆ ಹೋಗ್ತಾರೆ; ಅವರಪ್ಪನಾಣೆಗೂ ಅದು ಅವರಿಗೆ ಸಿಗಲ್ಲ. ಯಾಕಂದ್ರೆ ಐವತ್ತರ ದಶಕದಲ್ಲಿ ಅಂಡರ್‌ಟೇಕರ್ ಅನ್ನೋ ಬಾಕ್ಸರ್ರೇ ಇರ್ಲಿಲ್ಲ, ಇನ್ನು ಚಿತ್ರ ಎಲ್ಲಿಂದ ಬರಬೇಕು..! ಹುಡುಕ್ಲಿ ಬಡ್ಡೆತ್ತವು ಅಂತ ಹಿಂಗೆ ಮಾಡ್ದೆ...'

'ಇದ್ರಿಂದ ನಿಂಗೇನು ಲಾಭ ಸಿಕ್ತದಲಾ?' ಎಂದು ತಿಪ್ಪೇಶಿ ಕೇಳಿದ.
'ಲಾಭ ಏನೂ ಇಲ್ಲ ಮಗಾ; ಬೇರೆಯೋರನ್ನ ಆಟವಾಡ್ಸೋ ಗಾಂಧಿನಗರದೋರಿಗೆ ಬುದ್ಧಿ ಕಲ್ಸಕ್ಕೆ ಅಂತ ಹಿಂಗೆ ಮಾಡ್ದೆ; ಈಗ ನೋಡು, ಈ ಥರ ಸುದ್ದಿ ಬೇಕು ಅಂದಾಗ್ಲೆಲ್ಲಾ ಆ ಪೇಪರ್‌ನೋನು ನನ್‌ ಹತ್ರ ಬರ್ತಾನೆ. ನೂರೋ ಇನ್ನೂರೋ ಕಿತ್ಕೋಬೌದಾ? ಇದನ್ನೇ ಬದುಕೋ ದಾರಿ ಅಂತಾರೆ' ಎನ್ನುತ್ತಾ ಕಲ್ಲೇಶಿ ಕೋಲ್ಗೇಟ್‌ ಗೌಡರಂತೆ ಹಲ್ಲು ತೋರಿಸಿದ.

ಅವನ ದಂತಪಂಕ್ತಿಯ ಪ್ರಖರತೆಯನ್ನು ತಾಳಲಾರದೆ ತಿಪ್ಪೇಶಿ ಕಣ್ಣುಮುಚ್ಚಿಕೊಂಡ...!!

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ