ಪ್ರದೀಪ್‌ರಾಜ್ ನಿರ್ದೇಶನದ ಮತ್ತು ಯಶ್ ಅಭಿನಯದ 'ಕಿರಾತಕ' ಚಿತ್ರವು 50 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಮುಗಿಸಿದ್ದರ ದ್ಯೋತಕವಾಗಿ ಹಮ್ಮಿಕೊಳ್ಳಲಾಗಿದ್ದ ಸಂತೋಷ ಸಮಾರಂಭದಲ್ಲಿ ನೋವನ್ನೂ ಹಂಚಿಕೊಂಡಂಥ ಘಟನೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪ್ರದೀಪ್‌ರಾಜ್, 'ವಾಸ್ತವವಾಗಿ ನಮ್ಮ ಚಿತ್ರವು ಕಪಾಲಿ ಚಿತ್ರಮಂದಿರದಲ್ಲಿ ಚೆನ್ನಾಗಿ ನಡೆಯುತ್ತಿದ್ದರೂ 'ಜೋಗಯ್ಯ'ನಿಗಾಗಿ ಎತ್ತಂಗಡಿ ಮಾಡಲಾಯಿತು. ಇದು ನಿಜಕ್ಕೂ ಬೇಸರ ಹುಟ್ಟಿಸುವ ಸಂಗತಿ' ಎಂದು ನೊಂದುಕೊಂಡರು.
ಒಟ್ಟು 36 ಕೇಂದ್ರಗಳಲ್ಲಿ 'ಕಿರಾತಕ' ಅರ್ಧಶತಕವನ್ನು ಪೂರೈಸಿದ್ದಾನೆ. ಜನರು ಚಿತ್ರವನ್ನು ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕೇ ಎಂದು ಪ್ರಶ್ನಿಸಿದ ಪ್ರದೀಪ್‌ರಾಜ್ ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಲು ಮರೆಯಲಿಲ್ಲ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ-ನಿರ್ದೇಶಕ ಟಿ.ಎಸ್.ನಾಗಾಭರಣರು ಪ್ರದೀಪ್‌ರಾಜ್‌ರವರ ಮಾತಿಗೆ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾ, ತಮ್ಮ 'ಕಲ್ಲರಳಿ ಹೂವಾಗಿ' ಚಿತ್ರಕ್ಕೂ ಇದೇ ಬಗೆಯ ಅನ್ಯಾಯವಾಗಿದ್ದನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಟಿ ತಾರಾ, ಚಿತ್ರವು ಶತದಿನೋತ್ಸವವನ್ನು ಆಚರಿಸಿಕೊಳ್ಳಲಿ ಎಂದು ಹಾರೈಸಿದರು.