ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುಟ್ಟಣ್ಣ ಕಣಗಾಲ್‌ಗಿಂತ ನಮ್‌ ವೀರೇಂದ್ರಬಾಬು ಏನು ಕಮ್ಮೀನಾ? (Puttanna Kanagal | Verendra Babu | Kannada Movies | Gossip)
EVENT
ಅವರಿವರಿಗೆ ಸೆನ್ಸೇಷನಲ್‌ ಸುದ್ದಿಗಳನ್ನು ನೀಡುತ್ತಾ ಕಾಸುಮಾಡಿಕೊಳ್ಳುವ ಹೊಸ ವಿದ್ಯೆಯನ್ನು ಕಲಿತಿದ್ದ ಕಲ್ಲೇಶಿಯ ಲೇಫ್‌ಸ್ಟೈಲೇ ಬದಲಾಗಿತ್ತು. ಫುಟ್‌ಪಾತ್‌ನಲ್ಲಿ ಚಿತ್ರಾನ್ನ ಕೆದಕುತ್ತಿದ್ದವನಿಗೆ ಜನಾರ್ದನ ಹೊಟೇಲಿನಲ್ಲಿ ರೂಮು ಹಾಕಿಸುವಷ್ಟು ತಾಕತ್ತು ಬಂದಿತ್ತು. ಅವನೀಗ ತನ್ನ ಕೋಣೆಯ ಮುಂದೆ ಸಿನಿಮಾ ಪ್ರಚಾರಕರ್ತ ಎಂಬ ಬೋರ್ಡನ್ನು ತಗುಲಿಸಿಕೊಂಡಿದ್ದ...!!

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪರಿಣಾಮವಾಗಿ ಅವನು ತಿಪ್ಪೇಶಿಯನ್ನು ತನ್ನ ಅಸಿಸ್ಟೆಂಟ್‌ ಆಗಿ ನೇಮಿಸಿಕೊಂಡಿದ್ದ. ಇಬ್ಬರೇ ಇರೋವಾಗ ಪರಸ್ಪರ 'ಏನಲಾ... ಬಾರಲಾ' ಅಂತ ಕರೆದುಕೊಳ್ಳಬೇಕು, ಯಾರಾದರೂ ಗಟ್ಟಿಕುಳ ರೂಮಿಗೆ ಬಂದರೆ ತಿಪ್ಪೇಶಿಯು ಕಲ್ಲೇಶಿಯನ್ನು 'ಬಾಸ್‌' ಎಂದು ಕರೆಯಬೇಕು ಅನ್ನೋದು ಅವರ ನಡುವೆ ಏರ್ಪಟ್ಟಿದ್ದ ಒಂದು ಅಲಿಖಿತ ಒಪ್ಪಂದವಾಗಿತ್ತು. ಗಂಟೆಗಂಟೆಗೆ ಕೂಳು, ಮಲಗೋಕ್ಕೆ ಒಂದು ಸೂರು ಸಿಗುತ್ತೆ ಅಂದ್ರೆ ಯಾರಿಗೆ ತಾನೇ ಬೇಡ? ತಿಪ್ಪೇಶಿಯೂ ವಿಧಿಯಿಲ್ಲದೆ ಈ ಷರತ್ತಿಗೆ ಒಪ್ಪಿಕೊಂಡಿದ್ದ.

ಕೆಲಹೊತ್ತಿಗೆ ಎಲ್ಲಿಂದಲೋ ಫೋನ್‌ ಬಂತು. ಫೋನೆತ್ತಿಕೊಂಡ ಕಲ್ಲೇಶಿ, 'ಹೌದು ಹೌದು, ಪುಟ್ಟಣ್ಣ ಕಣಗಾಲರಿಗಿಂತ ನಮ್ ವೀರೇಂದ್ರಬಾಬು ಏನೂ ಕಮ್ಮಿ ಇಲ್ಲ ಬಿಡೀ.... ಹೌದೌದು.... ಆಯ್ತು.... ನಮಸ್ಕಾರ' ಎನ್ನುತ್ತಾ ಫೋನು ಕೆಳಗಿಟ್ಟ. ಇದರಿಂದ ಏನೂ ಅರ್ಥವಾಗದ ತಿಪ್ಪೇಶಿಯು 'ಏನು?' ಎಂಬಂತೆ ಕಲ್ಲೇಶಿಯ ಮುಖ ನೋಡಿದ.
ಅವನ ಮುಖದ ವರಸೆಯನ್ನು ಗಮನಿಸಿದ ಕಲ್ಲೇಶಿ, 'ಯಾವುದೋ ಪೇಪರ್‌ನೋರು ಫೋನು ಮಾಡಿದ್ರು ಮಗಾ; 'ಸ್ವಯಂಕೃಷಿ' ಚಿತ್ರದ ನಿರ್ಮಾಪಕ-ನಿರ್ದೇಶಕ ವೀರೇಂದ್ರಬಾಬು ಬಗ್ಗೆ ಕೇಳಿದ್ರು. ಅದಕ್ಕೇ ಹಂಗಂದೆ' ಎಂದು ಉತ್ತರಿಸಿದ.

'ಲೇಯ್‌ ಮಚ್ಚೀ, ಅದ್ಯಾಕಲಾ ಹಂಗಂದೆ? ಪುಟ್ಟಣ್ಣ ಕಣಗಾಲರಿಗೂ ನಿಮ್‌ ವೀರೇಂದ್ರಬಾಬುಗೂ ಏನಲಾ ಸಂಬಂಧಾ?' ಎಂದು ತಿಪ್ಪೇಶಿ ಕೆರಳಿ ಕೇಳಿದ. ಕಲ್ಲೇಶಿಯು ಮಂದಹಾಸ ಬೀರುತ್ತಾ, 'ನೋಡು ಮಗಾ ವಿಷ್ಣುವರ್ಧನ್‌, ಅಂಬರೀಷ್‌, ರಾಮಕೃಷ್ಣ, ಕಲ್ಪನಾ, ಆರತಿ, ಪದ್ಮಾವಾಸಂತಿ, ಶ್ರೀಧರ್ ಮೊದಲಾದೋರಿಗೆ ತಾರಾಪಟ್ಟ ಸಿಗೋಕ್ಕೆ ಕಾರಣವಾದವರು ನಮ್ಮ ಪುಟ್ಟಣ್ಣ ಕಣಗಾಲರು. ಅದಿಕ್ಕೇ ಅವರನ್ನ 'ಸ್ಟಾರ್ ಕ್ರಿಯೇಟರ್' ಅಂತ ಕರೀತಾರೆ. ಅದೇ ಥರಾ ನಮ್‌ ವೀರೇಂದ್ರ ಬಾಬೂನೂ 'ಕ್ರಿಯೇಟಿಂಗ್‌ ಸ್ಟಾರ್' ಅಂತ ಹೆಸರು ಇಟ್ಕಂಡವ್ರೆ. ಹಂಗಾಗಿ ಪುಟ್ಟಣ್ಣ ಕಣಗಾಲರಿಗಿಂತ ನಮ್‌ ವೀರೇಂದ್ರ ಬಾಬು ಏನು ಕಮ್ಮೀನಾ ಅಂತ ಹಂಗಂದೆ' ಎಂದು ಉತ್ತರಿಸಿದ.

ತಿಪ್ಪೇಶಿಗೆ ಅದು ಅರ್ಥವಾಗದ್ದರಿಂದ ಕಲ್ಲೇಶಿಯೇ ಮಾತು ಮುಂದುವರೆಸುತ್ತಾ, 'ನೋಡು ತಿಪ್ಪಾ, ರಾಜಕೀಯದಲ್ಲಿ ಮೇಲೆ ಬರಬೇಕು ಅಂತ ನಮ್‌ ಅಂಬರೀಷಣ್ಣನಿಗೆ ಎಷ್ಟೊಂದು ಆಸೆಯಿತ್ತು. 'ಸ್ವಯಂಕೃಷಿ' ಚಿತ್ರದಾಗೆ ಅವರನ್ನ ಮುಖ್ಯಮಂತ್ರೀನೇ ಮಾಡಿಬಿಟ್ರು ನಮ್‌ ವೀರೇಂದ್ರಬಾಬು; ಇದೂ ಸಾಲದು ಅಂತ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರನ್ನ ಕರ್ಕೊಂಡು ಬಂದು ಅವರಿಗೊಂದು ವಿಶೇಷ ಪಾತ್ರ ಕೊಟ್ಟಿದ್ದಾರಂತೆ.
ಹೀಗೆ ಒಬ್ಬೊಬ್ಬರನ್ನೂ ಸ್ಟಾರ್‌ಗಳಾಗಿ 'ಕ್ರಿಯೇಟ್‌' ಮಾಡ್ತಿರೋ ನಮ್‌ 'ಕ್ರಿಯೇಟಿಂಗ್‌ ಸ್ಟಾರ್' ವೀರೇಂದ್ರಬಾಬು ಪುಟ್ಟಣ್ಣನವರಿಗಿಂತ ಕಮ್ಮೀನಾ? ಪುಟ್ಟಣ್ಣ ಕಣಗಾಲ್ರು ಬರೀ ನಿರ್ದೇಶನ ಮಾಡ್ತಾ ಇದ್ರು, ಆಗಾಗ ಚಿತ್ರಕಥೇನೂ ಬರೀತಿದ್ರು. ಆದ್ರೆ ನಮ್‌ ವೀರೇಂದ್ರಬಾಬು ನೋಡು, ನಿರ್ಮಾಪಕ, ನಿರ್ದೇಶಕ, ನಾಯಕ ಎಲ್ಲಾ ಆಗವ್ರೇ. ಅವರು ಯಾರಿಗೆ ಕಮ್ಮಿ?' ಎನ್ನುತ್ತಾ ಕಾಫಿಗೆ ಆರ್ಡರ್ ಮಾಡಿದ.

ಕಲ್ಲೇಶಿಯ ವಿಶ್ಲೇಷಣಾ ಶಕ್ತಿ ತನಗಿಲ್ಲದಿರುವುದಕ್ಕೆ ತಿಪ್ಪೇಶಿ ನಿಂತಲ್ಲೇ ನೀರಾದ...!!

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ