ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೆ ಡಬ್ಬಿಂಗ್‌ ಚಿತ್ರಗಳು ಬೇಕೇ ಅಥವಾ ಬೇಡವೇ? (Kannada Movies | Dubbing | Remake | Indian Films)
PR
ಕನ್ನಡ ಚಿತ್ರರಂಗದಲ್ಲಿ ತಾಂಡವವಾಡುತ್ತಿರುವ ಹಲವು ಹನ್ನೊಂದು ಸಮಸ್ಯೆಗಳ ನಡುವೆ ಈಗ ಹೊಸತೊಂದು ಸಮಸ್ಯೆ ಉದ್ಭವವಾಗಿದೆ, ಮತ್ತು ಇದೇ ಕಾರಣಕ್ಕಾಗಿ ಡಬ್ಬಿಂಗ್‌ ಪರ ವಾದಿಸುವ ಮತ್ತು ಅದನ್ನು ವಿರೋಧಿಸುವವರ ಎರಡೂ ಬಣಗಳು ಅಥವಾ ವಲಯಗಳು ಹುಟ್ಟಿಕೊಂಡಿವೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಡಬ್ಬಿಂಗ್‌ ಚಿತ್ರಗಳ ಅವಶ್ಯಕತೆಯಿದೆಯೇ? ಒಂದು ಭಾಷೆಯಲ್ಲಿ ತಯಾರಾದ ಚಿತ್ರಗಳು ಮತ್ತೊಂದು ಭಾಷೆಗೆ ಮತ್ತು ಅದರ ಸಂಸ್ಕೃತಿಗೆ ಹೊಂದಿಕೊಳ್ಳುತ್ತದೆಯೇ? ಕನ್ನಡದಲ್ಲೇ ತಯಾರಾದ ಚಿತ್ರಗಳ ಕೆಲ ಸನ್ನಿವೇಶಗಳಲ್ಲಿ ಪಾತ್ರಧಾರಿಗಳ ತುಟಿಚಲನೆಗೆ ಅನುಸಾರವಾಗಿ ಮಾತುಗಳನ್ನು ಪೋಣಿಸದಿರುವ ಸಂದರ್ಭಗಳಲ್ಲಿ ಚಿತ್ರವೀಕ್ಷಣೆಯಲ್ಲಿ ಮುಜುಗರವಾಗುವ ಸಾಧ್ಯತೆಗಳಿರುವಾಗ, ಸಾರಾಸಗಟಾಗಿ ಚಿತ್ರವನ್ನು ಡಬ್‌ ಮಾಡಿದರೆ ಮತ್ತಷ್ಟು ಆಭಾಸ ಗೋಚರಿಸಿ ಚಿತ್ರವೀಕ್ಷಣೆಯ ಅನುಭೂತಿಯೇ ಹಾಳಾಗುವುದಿಲ್ಲವೇ? ಎಂಬಂಥ ಸಾಲುಸಾಲು ಪ್ರಶ್ನೆಗಳು ನಿಜವಾದ ಚಿತ್ರರಸಿಕರಲ್ಲೇನೋ ಮೂಡಬಹುದು.

ಆದರೆ ಡಬ್ಬಿಂಗ್‌ ಚಿತ್ರಗಳು ಬೇಕೆಂದು ವಾದಿಸುವವರು ಮುಂದಿಡುವ ಸಮರ್ಥನೆಯೇ ಬೇರೆ. ಇದರಿಂದ ಸ್ಟಾರ್‌ಗಳ ಸಂಭಾವನೆ ಕಡಿತವಾದಂತಾಗುತ್ತದೆ, ಇತರ ಭಾಷೆಗಳ ಪೈಪೋಟಿಯನ್ನು ಎದುರಿಸಬೇಕಾಗಿ ಬರುವುದರಿಂದ ಸಹಜವಾಗಿಯೇ ಕನ್ನಡದಲ್ಲಿ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ಇವರ ವಾದದಲ್ಲಿನ ಪ್ರಮುಖ ಅಂಶಗಳು.

ಇನ್ನು ಡಬ್ಬಿಂಗ್‌ ವಿರೋಧಿಗಳು ವಾದಿಸುವ ಪ್ರಕಾರ, ಈಗಾಗಲೇ ರಿಮೇಕ್‌ ಚಿತ್ರಗಳಿಂದ ಕನ್ನಡತನವೆಂಬುದು ಕಲಬೆರಕೆಗೆ ಈಡಾಗಿರುವಾಗ ಇದರ ಜೊತೆಗೆ ಡಬ್ಬಿಂಗ್‌ ಚಿತ್ರಗಳೂ ಬಂದುಬಿಟ್ಟರೆ ಕನ್ನಡತನವೆನ್ನುವುದು ಸಂಪೂರ್ಣವಾಗಿ ನಾಶವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹೊಸದಾಗಿ ನಿರ್ಮಾಣವಾಗುವ ಚಿತ್ರಗಳನ್ನೇ ನೆಚ್ಚಿಕೊಂಡಿರುವ ಇಲ್ಲಿನ ಕಲಾವಿದರು, ಕಾರ್ಮಿಕರು, ತಂತ್ರಜ್ಞರ ಹೊಟ್ಟೆಗೆ ನೇರವಾಗಿ ಹೊಡೆದಂತಾಗುತ್ತದೆ. ಇದೊಂದು ಆತ್ಮಹತ್ಯೆಯ ಪ್ರಯತ್ನವೆನ್ನದೆ ವಿಧಿಯಿಲ್ಲ.

ಎರಡೂ ಬಣದವರ ವಾದಗಳನ್ನು ಅವಲೋಕಿಸುವ ಚಿತ್ರರಸಿಕರು ಅಭಿಪ್ರಾಯಪಡುವುದೇ ಬೇರೆ. ನೀವು ರಿಮೇಕ್‌ ಚಿತ್ರಗಳನ್ನು ಮಾಡುತ್ತೀರೋ, ಸ್ವಮೇಕ್‌ ಚಿತ್ರಗಳನ್ನು ಮಾಡುತ್ತಿರೋ ಅಥವಾ ಸಂಪೂರ್ಣ ಡಬ್‌ ಆಗಿರುವ ಚಿತ್ರವನ್ನೇ ನಮಗೆ ನೀಡುತ್ತೀರೋ ನಮಗೆ ಗೊತ್ತಿಲ್ಲ. ಆದರೆ ನಿಮ್ಮ ಹಿತಾಸಕ್ತಿಗಳನ್ನಷ್ಟೇ ನೋಡಿಕೊಳ್ಳುವ ನೀವು ಕನ್ನಡಿಗರಿಗೆ ಒಳ್ಳೆಯ ಚಿತ್ರಗಳನ್ನು ನೀಡಬೇಕೆಂದು ಮನಸ್ಸು ಮಾಡಿದ್ದೇ ಆದಲ್ಲಿ ಅದು ಅಸಾಧ್ಯವಾದ ಮಾತೇನೂ ಅಲ್ಲ. ಇಲ್ಲಿನ ಬಹುತೇಕರಿಗೆ ಸಿದ್ಧಸರಕು ಬೇಕು. ಕನ್ನಡದಲ್ಲಿ ಲಭ್ಯವಿರುವ ಸಾಹಿತ್ಯಕೃತಿಗಳನ್ನು ಕೈಗೆತ್ತಿಕೊಂಡು, ಮೂರ್ನಾಲ್ಕು ತಿಂಗಳವರೆಗೆ ಶ್ರಮವಹಿಸಿ ಚಿತ್ರಕಥೆಯನ್ನು ರಚಿಸಿ ಉತ್ತಮ ಚಿತ್ರವನ್ನು ಕಟ್ಟಿಕೊಟ್ಟರೆ ಕನ್ನಡಿಗರು ಅದನ್ನು ಪ್ರೋತ್ಸಾಹಿಸದೇ ಇರುತ್ತಾರೆಯೇ ಎಂಬುದು ಚಿತ್ರರಸಿಕರ ಪ್ರಶ್ನೆ.

ಒಟ್ಟಿನಲ್ಲಿ ಚಿತ್ರೋದ್ಯಮಿಗಳಿಗೆ, ಕಲಾವಿದ-ತಂತ್ರಜ್ಞರಿಗೆ, ಸರ್ಕಾರಕ್ಕೆ ಮತ್ತು ಅಂತಿಮವಾಗಿ ಪ್ರೇಕ್ಷಕರಿಗೆ ನಷ್ಟವಾಗದ ರೀತಿಯಲ್ಲಿ ಒಂದು ಸಮನ್ವಯ ಮಾರ್ಗವನ್ನು ಕಂಡುಕೊಂಡು ಸೂಕ್ತವಾದ ನಿರ್ಧಾರಕ್ಕೆ ಬರುವ ಜವಾಬ್ದಾರಿ ಗಾಂಧಿನಗರದ ಮೇಲಿದೆ. ಇಲ್ಲವಾದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಜಟಾಪಟಿ ತಪ್ಪಿದ್ದಲ್ಲ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ