ಚಲನಚಿತ್ರವೊಂದರ ವಿತರಣೆಯ ಹಕ್ಕುಗಳನ್ನು ಪಡೆಯುವಾಗ/ನೀಡುವಾಗ ಒಬ್ಬೊಬ್ಬರು ಒಂದೊಂದು ವಿಧಾನವನ್ನು ಅನುಸರಿಸುತ್ತಾರೆ. ಚಿತ್ರವೊಂದು ಸಂಪೂರ್ಣಗೊಂಡಾಗ ಅದರ ಪೂರ್ವಭಾವಿ ಪ್ರದರ್ಶನಕ್ಕೆ ಹಾಜರಾಗಿ ಚಿತ್ರವನ್ನು ಸಮಗ್ರವಾಗಿ ಅವಲೋಕಿಸಿ ವಲಯವಾರು ಬೆಲೆಯನ್ನು ನಮೂದಿಸುವುದು ಚಾಲ್ತಿಯಲ್ಲಿರುವ ಪದ್ಧತಿ. ಹಲವಾರು ಹಂತಗಳ ಮಾತುಕತೆಯಾದ ನಂತರ ಹೆಚ್ಚಿನ ಬೆಲೆಯನ್ನು ನಮೂದಿಸಿದವರಿಗೆ ನಿರ್ದಿಷ್ಟ ವಲಯದ ವಿತರಣಾ ಹಕ್ಕುಗಳು ದೊರೆಯುತ್ತವೆ. ಇದು ಒಂದು ವಿಧಾನ.
ಆದರೆ, ಚಿತ್ರವು ಸಂಪೂರ್ಣವಾಗುವರೆಗೆ ಕಾಯದೆ ಅಥವಾ ಬಿಡುಗಡೆಗೆ ಪೂರ್ವಭಾವಿಯಾಗಿ ಚಿತ್ರವನ್ನೇ ನೋಡದೆ ಚಿತ್ರದಲ್ಲಿರುವ ತಾರೆಗಳಾರು? ಅವರ ಮಾರುಕಟ್ಟೆ ಮೌಲ್ಯವೇನು? ತಂತ್ರಜ್ಞರಾರು? ಹಾಡುಗಳು ಹೇಗೆ ಬಂದಿವೆ? ಚಿತ್ರದ ನಿರ್ದೇಶಕರ ಹಿಂದಿನ ಚಿತ್ರಗಳು ಯಾವ ಫಲಿತಾಂಶವನ್ನು ನೀಡಿವೆ? ಇವೇ ಮೊದಲಾದ ಅಂಶಗಳನ್ನು ಅವಲೋಕಿಸಿ ಚಿತ್ರವೊಂದರ ವಿತರಣೆ ಹಕ್ಕುಗಳಿಗೆ ಮಾತುಕತೆಗೆ ಕೂರುವ ಮತ್ತೊಂದು ವಿಧಾನವೂ ಇದೆ. ಇದನ್ನು 'ಬ್ಲೈಂಡ್ ಮೆಥಡ್' ಎಂದು ಕರೆಯುತ್ತಾರೆ. ಇಲ್ಲಿ ಚಿತ್ರವನ್ನು ಅಳೆದೂ-ಸುರಿದೂ ವಿತರಣೆಗೆ ತೆಗೆದುಕೊಳ್ಳುವುದರ ಬದಲು, ಟ್ರೆಂಡ್ ಯಾವ ರೀತಿಯಲ್ಲಿದೆ? ಒಂದೇ ಸಲಕ್ಕೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಹುದೇ? ಎಂಬೆಲ್ಲಾ ಲೆಕ್ಕಾಚಾರಗಳು ಸೇರಿಕೊಂಡಿರುತ್ತವೆ. ಇದು ಎರಡನೇ ವಿಧಾನ.
ವಿತರಕರೊಬ್ಬರು ದಾಖಲೆಯ ಮೊತ್ತವನ್ನು ನೀಡಿ ಬೆಂಗಳೂರು-ಕೋಲಾರ-ತುಮಕೂರು (ಬಿಕೆಟಿ) ವಲಯಕ್ಕೆ 'ಜೋಗಯ್ಯ' ಚಿತ್ರದ ವಿತರಣೆಯ ಹಕ್ಕುಗಳು ಪಡೆದಿರುವುದು ಇಷ್ಟೆಲ್ಲಾ ಪೀಠಿಕೆಗೆ ಕಾರಣವಾಯಿತು. ಕಾರಣ ವಿತರಣಾ ಹಕ್ಕುಗಳನ್ನು ಪಡೆಯುವುದಕ್ಕೆ ಮುಂಚೆ ಅವರು ಈ ಚಿತ್ರವನ್ನು ನೋಡಿಲ್ಲವಂತೆ. 'ಇದು ಶಿವರಾಜ್ ಕುಮಾರ್ ಅವರ 100ನೇ ಚಿತ್ರ, ನಿರ್ದೇಶಕ ಪ್ರೇಮ್‌ರವರ ಕನಸಿನ ಕೂಸು; ಈ ಕೂಸು ಕಳಪೆಯಾಗಿರಲು ಸಾಧ್ಯವೇ ಇಲ್ಲ' ಎಂಬ ಭರವಸೆಯೊಂದಿಗೆ ಅವರು ಈ ಚಿತ್ರಕ್ಕೆ ಹಣವನ್ನು ಸುರಿದಿದ್ದಾರಂತೆ.
ಈಗಾಗಲೇ ಚಿತ್ರದ ಧ್ವನಿಸುರುಳಿಗಳು ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗಿರುವುದೊಂದು ಒಳ್ಳೆಯ ಸೂಚನೆಯಾಗಿರುವುದರಿಂದ ಅದು ಸಿನಿಮಾದ ಗಳಿಕೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ. ಹೀಗಾಗಿ ಈ ಜೂಜಾಟದಲ್ಲಿ ತಾವು ಖಂಡಿತಾ ಗೆಲ್ಲುವ ಭರವಸೆಯನ್ನು ಸದರಿ ವಿತರಕರು ಹೊಂದಿದ್ದಾರೆ.
ಕೂಲಂಕಷವಾಗಿ ವೀಕ್ಷಿಸಿ ವಿತರಣೆಗೆ ಪಡೆದ ಚಿತ್ರವೇ ಕೆಲವೊಮ್ಮೆ ಹೂಡಿದ ಬಂಡವಾಳವನ್ನು ವಾಪಸ್ ತಂದುಕೊಡುವುದಿಲ್ಲ. ಹೀಗಿರುವಾಗ ಬಿಕೆಟಿ ಪ್ರಾಂತ್ಯದ ವಿತರಕರ ಸಾಹಸ ಮೆಚ್ಚುವಂಥದ್ದೇ. 'ಜೋಗಯ್ಯ'ನ ವಿತರಣೆಯಿಂದ ಅವರು ನಿರೀಕ್ಷಿಸಿದಷ್ಟು ಹಣ ಸಂಪಾದಿಸಿಕೊಳ್ಳಲಿ ಎಂಬುದು ನಮ್ಮ ಹಾರೈಕೆ.