ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್ ಗಿಮಿಕ್ ಪ್ರಚಾರ ಬಿಟ್ಟು ಹೋಂವರ್ಕ್ ಮಾಡಿದ್ರೆ ಹೆಂಗೆ? (Prem | Jogayya | Shivaraj Kumar | Raj | Sandalwood | Kannada Film News | Kannada Movies)
EVENT
ಶಿವಣ್ಣ ಅಭಿನಯದ 'ಜೋಗಯ್ಯ' ಚಿತ್ರದ ಫಲಿತಾಂಶಗಳು ಏನೇ ಬರಲಿ, ಅದರಿಂದ ವಿತರಕರು ದುಡ್ಡುಮಾಡಿಕೊಳ್ಳಲಿ ಬಿಡಲಿ, ನಿರ್ದೇಶಕ ಪ್ರೇಮ್‌ ಒಂದು ವಿಷಯವನ್ನಂತೂ ಸ್ಪಷ್ಟ ಮಾಡಿಕೊಳ್ಳಬೇಕಿದೆ. ಅದೆಂದರೆ ಗಿಮಿಕ್‌ ಮತ್ತು ಪ್ರಚಾರವನ್ನು ಮಿತಿಮೀರಿ ನೆಚ್ಚಿಕೊಳ್ಳುವ ಪರಿಪಾಠವನ್ನು ಅವರು ಬಿಟ್ಟುಬಿಡಬೇಕು ಎಂಬುದು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚಿತ್ರವೊಂದಕ್ಕೆ ಪ್ರಚಾರ ಮತ್ತು ಗಿಮಿಕ್‌ಗಳು ಒಂದು ಮಟ್ಟಕ್ಕೆ ಇದ್ದರೆ ಚೆನ್ನ, ಆದರೆ ಅದೇ ಸರ್ವಸ್ವ ಎನ್ನುವಂತಾದರೆ ಜನ ಮುಂದೊಂದು ದಿನ ಅವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ನೆನಪಿಸಲು ಈ ಮಾತುಗಳನ್ನು ಹೇಳಬೇಕಾಗಿ ಬಂದಿದೆ. ತಮ್ಮ ನಿರ್ದೇಶನದಲ್ಲಿ ಬಂದ 'ಪ್ರೀತಿ ಏಕೆ ಭೂಮಿ ಮೇಲಿದೆ' ಮತ್ತು 'ರಾಜ್‌' ಚಿತ್ರಗಳ ಸಂದರ್ಭದಲ್ಲಿ ಯಾವ ಗಿಮಿಕ್ಕುಗಳೂ, ಯಾವ ಪ್ರಚಾರಗಳೂ ಕೈಹಿಡಿಯಲಿಲ್ಲ ಎಂಬುದನ್ನು ಪ್ರೇಮ್‌ ಗಮನಿಸಬೇಕು.

ಒಂದು ಚಿತ್ರವನ್ನು 'ನೋಟೇಬಲ್‌' ಎಂಬ ರೀತಿಯಲ್ಲಿ ಕಟ್ಟುವ ಸಾಮರ್ಥ್ಯ ಪ್ರೇಮ್‌ಗೆ ಖಂಡಿತಾ ಇದೆ. ಆದರೆ ಚಿತ್ರಕ್ಕೆ ಆತ್ಮವಾದ ಕಥೆಯನ್ನು ಗಟ್ಟಿಗೊಳಿಸುವ ಬದಲು ಅದಕ್ಕೆ ಅಂದದ ಚೌಕಟ್ಟನ್ನು ಹಾಕುವುದರ ಕಡೆಗೇ ಪ್ರೇಮ್‌ ಯೋಚಿಸುತ್ತಾ ಹೋಗುತ್ತಾರೆ. ಇದರಿಂದಾಗಿ ನಿರ್ಮಾಣ ವೆಚ್ಚಗಳು ಹೆಚ್ಚುತ್ತಲೇ ಹೋಗುತ್ತವೆ; ಚಿತ್ರ ಯಶಸ್ವಿಯಾದರೆ ಪರವಾಗಿಲ್ಲ, ಒಂದು ವೇಳೆ ಮಗುಚಿಕೊಂಡರೆ ನಿರ್ಮಾಪಕರು/ವಿತರಕರು ತಲೆ ಮೇಲೆ ಕೈಯಿಟ್ಟುಕೊಳ್ಳಬೇಕಾಗುತ್ತದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಎಲ್ಲಾ ನಿರ್ಮಾಪಕರೂ ಕೋಟಿಗಟ್ಟಲೆ ಥೈಲಿಯನ್ನು ಇಟ್ಟುಕೊಂಡೇ ಓಡಾಡುವುದಿಲ್ಲವಲ್ಲ?

ಪ್ರೇಮ್‌ರವರ ಮೊದಲ ಮೂರು ಚಿತ್ರಗಳಲ್ಲಿ ಅವರೊಟ್ಟಿಗೆ ದುಡಿದ ಚಿತ್ರಕಥಾ ರಚನೆಗಾರರು, ಸಂಭಾಷಣೆಕಾರರು ಮತ್ತು ಹಿತೈಶಿಗಳು ಈಗ ಅವರೊಟ್ಟಿಗೆ ಇಲ್ಲ, ಹಾಗಾಗಿ ಚಿತ್ರದ ಕಥೆಯಲ್ಲಿ ಗಟ್ಟಿತನವಿರುವುದಿಲ್ಲ ಎಂಬ ಅಭಿಪ್ರಾಯವೂ ಅಲ್ಲಲ್ಲಿ ಕೇಳಿಬರುತ್ತಿದೆ. ಈ ಕುರಿತು ಪ್ರೇಮ್‌ ಮತ್ತಷ್ಟು ಗಂಭಿರವಾಗಿ ಯೋಚಿಸುವುದು ಅಗತ್ಯ.

ಚಿತ್ರವೊಂದನ್ನು ಸೆಟ್ಟೇರಿಸುವುದಕ್ಕೆ ಮುಂಚೆ ಅದಕ್ಕೆ ಅಗತ್ಯವಿರುವ ಎಲ್ಲಾ ಸಾಹಿತ್ಯಿಕ ಪರಿಕರಗಳು, ಪರಿಪೂರ್ಣ ಕಥೆ-ಚಿತ್ರಕಥೆ ಸಿದ್ಧವಾಗಿದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಅಗತ್ಯ. ಕನ್ನಡ ಚಿತ್ರರಂಗಕ್ಕೆ ಪ್ರೇಮ್‌ರಂಥ ಉತ್ಸಾಹಿಗಳ ಅಗತ್ಯ ತುಂಬಾ ಇದೆ; ಆದರೆ ಅವರು ಪ್ರಚಾರ ಮತ್ತು ಗಿಮಿಕ್‌ಗಳ ಭರಾಟೆಯಲ್ಲಿ ತಮ್ಮನ್ನು ಕಳೆದುಕೊಳ್ಳುವುದು ಬೇಡ ಎಂಬುದೇ ನಮ್ಮ ಹಿತೋಕ್ತಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ