ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕಿರಾತಕ'ನ ಎತ್ತಂಗಡಿ; ಉತ್ತರ ಹೇಳುವವರು ಯಾರು? (Kirathaka | Jogayya | Yash | Shivarajkumar | Latest Movies in Kannada | Latest Kannada Movie News | Kannada Film News | Kannada Movies)
EVENT
ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿ ಒಳ್ಳೆಯ ಓಪನಿಂಗ್‌ ಪಡೆದುಕೊಳ್ಳುವುದೇ ಅಪರೂಪ. ಪಡೆದುಕೊಂಡರೂ 50 ದಿನಗಳು, 100 ದಿನಗಳ ಭರ್ಜರಿ ಓಟವನ್ನು ದಾಖಲಿಸುವುದೇ ಅಪರೂಪ ಎಂಬ ವಸ್ತುಸ್ಥಿತಿಯಿರುವಾಗ, ಪ್ರಮುಖ ಚಿತ್ರಮಂದಿರದಲ್ಲಿ ಚೆನ್ನಾಗಿ ನಡೆಯುತ್ತಿರುವ ಚಿತ್ರವೊಂದನ್ನು ತೆಗೆದುಹಾಕುವಂತಾದರೆ ಅದಕ್ಕೆ ಯಾರು ಹೊಣೆ? ಅದರ ಸ್ಥಾನಕ್ಕೆ ಬಂದು ಕೂರುವ ಚಿತ್ರದ ತಂಡವು ಎಷ್ಟು ಕಷ್ಟಪಟ್ಟಿರುತ್ತದೆಯೋ ಹೀಗೆ ಎತ್ತಂಗಡಿ ಮಾಡಿಸಿಕೊಂಡ ಚಿತ್ರವೂ ಅಷ್ಟೇ ಕಷ್ಟಪಟ್ಟಿರುತ್ತದೆ ಎಂಬ ವಾಸ್ತವಾಂಶ ನಮ್ಮ ಜನಗಳಿಗೆ ಗೊತ್ತಾಗುವುದು ಯಾವಾಗ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶಿವರಾಜ್‌ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರಮಂದಿರಕ್ಕೆ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸಂತೋಷ್‌ ಚಿತ್ರಮಂದಿರ ಮಾತ್ರವೇ ಅಲ್ಲದೇ ಕಪಾಲಿ ಚಿತ್ರಮಂದಿರವನ್ನೂ ಬಿಡಿಸಿಕೊಂಡಾಗ ಉದ್ಭವವಾದ ಪ್ರಶ್ನೆಯಿದು. ಅಲ್ಲಿ ಯಶ್‌ ಅಭಿನಯದ 'ಕಿರಾತಕ' ಚಿತ್ರ ಓಡುತ್ತಿತ್ತು ಮತ್ತು 50 ದಿನಗಳ ಯಶಸ್ವೀ ಓಟವನ್ನು ಅಲ್ಲಿ ಮುಗಿಸಿತ್ತು. ಹೀಗೆ ಎತ್ತಂಗಡಿ ಮಾಡಿದಾಗ 'ಕಿರಾತಕ' ಚಿತ್ರಕ್ಕೆ ದುಡಿದವರಿಗೆ ನೋವಾಗುವುದಿಲ್ಲವೇ?

ಈ ರೀತಿಯ ಪ್ರಕರಣ ಇದೇ ಮೊದಲಲ್ಲ ಮತ್ತು ಸಂಬಂಧಪಟ್ಟವರು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರಾಯಶಃ ಇದು ಕೊನೆಯದೂ ಆಗಲಾರದು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಸುಮಾರು 2 ವರ್ಷಗಳ ಹಿಂದೆ ಸಂತೋಷ್‌ ಚಿತ್ರಮಂದಿರದಲ್ಲಿ ನಾಗಾಭರಣ ನಿರ್ದೇಶನದ ಮತ್ತು ವಿಜಯ ರಾಘವೇಂದ್ರ ಅಭಿನಯದ 'ಕಲ್ಲರಳಿ ಹೂವಾಗಿ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ಪುನೀತ್‌ ರಾಜ್‌ಕುಮಾರ್ ಅಭಿನಯದ 'ಅರಸು' ಚಿತ್ರವನ್ನು ಬಿಡುಗಡೆ ಮಾಡುವ ದೃಷ್ಟಿಯಿಂದ 'ಕಲ್ಲರಳಿ ಹೂವಾಗಿ' ಚಿತ್ರವನ್ನು ಎತ್ತಂಗಡಿ ಮಾಡಲಾಯಿತು. ಆಗ ನಾಗಾಭರಣ ಇದನ್ನು ವಿರೋಧಿಸಿದ್ದರು.

'ಕಿರಾತಕ' ಚಿತ್ರಕ್ಕಾದ ಅನ್ಯಾಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದವರು ಹೇಳುವ ಪ್ರಕಾರ, 'ಜೋಗಯ್ಯ' ಚಿತ್ರಕ್ಕೆ ಸಂತೋಷ್‌ ಚಿತ್ರಮಂದಿರವಾಗಲೇ ಸಿಕ್ಕಿತ್ತು; ಕೆಂಪೇಗೌಡ ರಸ್ತೆಯದೇ ಮತ್ತೊಂದು ಚಿತ್ರಮಂದಿರ ಬೇಕು ಎಂದಾಗಿದ್ದಲ್ಲಿ ಬೇರಾವುದಾದರೂ ಆಯ್ಕೆಯ ಕುರಿತು ಗಮನ ಹರಿಸಬಹುದಿತ್ತು. ಆದರೆ ಚೆನ್ನಾಗಿ ನಡೆಯುತ್ತಿದ್ದ 'ಕಿರಾತಕ' ಚಿತ್ರವನ್ನು ತೆಗೆದುಹಾಕುವ ಅಗತ್ಯವಿರಲಿಲ್ಲ.

ವಿಪರ್ಯಾಸದ ಸಂಗತಿಯೆಂದರೆ ಇಂಥ ಸಂದರ್ಭಗಳಲ್ಲಿ ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕಿರುವ ಕನ್ನಡ ಚಿತ್ರರಂಗದ 'ಹಲವು' ಮಂಡಳಿಗಳು ಸುಮ್ಮನಿದ್ದುಬಿಡುತ್ತವೆ. ಉಸಿರಿದ್ದವರು ಬದುಕುತ್ತಾರೆ, ಇಲ್ಲದವರು ನೋವನ್ನು ನುಂಗಿಕೊಂಡೇ ಮುಂದುವರಿಯಬೇಕು. ಪರಭಾಷಾ ಚಿತ್ರಗಳ ಹಾವಳಿಯ ಕಥೆಯಿರಲಿ, ಕನ್ನಡ ಚಿತ್ರಗಳೇ ಕನ್ನಡ ಚಿತ್ರಗಳಿಗೆ ಅಡ್ಡಮುಳ್ಳಾಗಿ ಪರಿಣಮಿಸಿದರೆ ಯಾರ ಹತ್ತಿರ ನೋವು ತೋಡಿಕೊಳ್ಳಬೇಕು? ಈ ಅನ್ಯಾಯವನ್ನು ಸರಿಪಡಿಸುವವರಾರು?

ಅದು ಉತ್ತರವಿಲ್ಲದ ಪ್ರಶ್ನೆ...!!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ