ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ ನೋ ಚೇಂಜ್, ಟಿಪ್ಪು ಮಾತ್ರ ವಿಲನ್! (Vishnuvardhana | Sudeep | Dwarakeesh | Tippu | Villian | Audithya | Latest Movies in Kannada | Latest Kannada Movie News | Kannada Film News | Kannada)
ವಿಷ್ಣುವರ್ಧನ ನೋ ಚೇಂಜ್, ಟಿಪ್ಪು ಮಾತ್ರ ವಿಲನ್!
PR
ಸಂಬಂಧವೇ ಇಲ್ಲ ವಿಷಯವನ್ನು ಹೊಂದಿರುವ ಚಿತ್ರವೊಂದಕ್ಕೆ ಜನಪ್ರಿಯ ವ್ಯಕ್ತಿಗಳ ಹೆಸರಿಡುವುದು ಎಷ್ಟು ಸರಿ? ಇದು ಕನ್ನಡ ಚಿತ್ರರಂಗಕ್ಕೆ ಅಂಟಿಕೊಂಡಿರುವ ಹೊಸ ರೋಗವಿದು ಅನ್ನದೆ ವಿಧಿಯಿಲ್ಲ. ಈ ನಡುವೆ ಸಮಾಧಾನಕರ ವಿಚಾರ ಅಂದ್ರೆ, ಇಬ್ಭಾಗದತ್ತ ದಾಪುಗಾಲು ಹಾಕಿದ್ದ ಚಿತ್ರರಂಗವನ್ನು ಮುನಿರತ್ನಂ ರಕ್ಷಿಸಿದ್ದಾರೆ ಎನ್ನುವುದು.
ಇದು 'ವಿಷ್ಣುವರ್ಧನ' ಚಿತ್ರದ ಟೈಟಲ್ ವಿವಾದ. ಈ ಟೈಟಲ್ ಕೊಡುವುದಿಲ್ಲ ಅಂತ ಭಾರತಿ ವಿಷ್ಣುವರ್ಧನ್, ಬೇಕೇ ಬೇಕು ಅಂತ ದ್ವಾರಕೀಶ್ ಪಟ್ಟು ಹಿಡಿದಿದ್ದರು. ನ್ಯಾಯಾಲಯದ ಮೊರೆ ಹೋಗುವ ಕುರಿತೂ ದ್ವಾರಕೀಶ್ ಹೇಳಿಕೊಂಡಿದ್ದರು. ಈ ಸಮರದಲ್ಲೀಗ ಕುಳ್ಳ ಗೆದ್ದಿದ್ದಾರೆ. ಸುದೀಪ್ ನಾಯಕರಾಗಿರೋ 'ವಿಷ್ಣುವರ್ಧನ' ಶೀರ್ಷಿಕೆಗೆ ಅಭ್ಯಂತರವಿಲ್ಲ ಅಂತ ಭಾರತಿ ಹೇಳಿದ್ದಾರೆ.
ಇದಕ್ಕೆ ಕಾರಣವಾಗಿರೋದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನಂ ಮತ್ತು ಕಾರ್ಯದರ್ಶಿ ಸೂರಪ್ಪ ಬಾಬು. ಇಬ್ಬರೂ ಭಾರತಿಯವರ ಮನವೊಲಿಸಿದ್ದಾರೆ. ಭಾರತಿ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ದ್ವಾರಕೀಶ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ಬಹುದೊಡ್ಡ ವಿವಾದವೊಂದು ಅಂತ್ಯ ಕಂಡಿದೆ.
ಪ್ರಿಯಾಮಣಿ ಮತ್ತು ಭಾವನಾ ನಾಯಕಿಯರಾಗಿರುವ ಈ ಚಿತ್ರ ಈಗ ಚಿತ್ರೀಕರಣವನ್ನೂ ಬಹುತೇಕ ಮುಗಿಸಿದೆ. ಇನ್ನೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ. ನಿರ್ದೇಶಕ ವಿ. ಕುಮಾರ್ ಪ್ರಕಾರ, ಸೆಪ್ಟೆಂಬರ್ 23ರಂದು ಚಿತ್ರ ಬಿಡುಗಡೆ. ಸೆನ್ಸಾರ್ ತೊಂದರೆಯಾದರೆ ಒಂದು ವಾರ ವಿಳಂಬವಾಗಬಹುದು.
ಇನ್ನು ಡೆಡ್ಲಿ ಸ್ಟಾರ್ ಆದಿತ್ಯ ನಾಯಕರಾಗಿರೋ ಚಿತ್ರ ಕೂಡ ಅಂತಹುದೇ ವಿವಾದಕ್ಕೆ ಕಾರಣವಾಗಿತ್ತು. ನೆಗೆಟಿವ್ ಶೇಡ್ ಹೊಂದಿರೋ ಇವರ ಚಿತ್ರಕ್ಕೆ 'ಟಿಪ್ಪು' ಅಂತ ಹೆಸರಿಡಲಾಗಿತ್ತು. ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರಮರಣವನ್ನಪ್ಪಿದ್ದ ಸ್ವಾತಂತ್ರ್ಯ ಸೇನಾನಿಯ ಹೆಸರನ್ನು ಹೀಗೆ ಬಳಸಿಕೊಳ್ಳುವುದು ಎಷ್ಟು ಸರಿ ಅನ್ನೋದು ಪ್ರಶ್ನೆ. ಮಾಸ್ತಿ, ವೀರ ಮದಕರಿ, ಕೆಂಪೇಗೌಡ ಮುಂತಾದ ಹೆಸರುಗಳನ್ನು ಸಂಬಂಧಪಡದ ಚಿತ್ರಗಳಿಗೆ ಇಡುವುದಾದರೆ, ಇದ್ಯಾಕೆ ಸಾಧ್ಯವಿಲ್ಲ ಅನ್ನೋದು ಉತ್ತರ.
ಅದೇನೇ ಇರಲಿ, ಈಗ ಈ ವಿವಾದವೂ ಬಗೆಹರಿದಿದೆ. ಯೋಗೀಶ್ ಹುಣಸೂರು ನಿರ್ಮಾಣದ ಎಂ.ಎಸ್. ರಮೇಶ್ ನಿರ್ದೇಶನ ಚಿತ್ರಕ್ಕೆ ಹೊಸ ಹೆಸರಿಡಲಾಗಿದೆ. ಅದು 'ವಿಲನ್'. ಚಿತ್ರದ ನಾಯಕಿ ಗ್ಲಾಮರ್ ಬೊಂಬೆ ರಾಗಿಣಿ.
'ವಿಲನ್' ಆಗಿ ಬದಲಾಗಿರೋ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.