ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬೆಳದಿಂಗಳಾಗಿ ಬಾ
ಸಿನಿಮಾ ಮುನ್ನೋಟ
Feedback Print Bookmark and Share
 
ಮುಂಗಾರು ಮಳೆ ಮತ್ತು ದುನಿಯಾ ಚಿತ್ರಗಳ ಯಶಸ್ಸಿನ ನಂತರ ಅಂತಹುದೇ ಮತ್ತೊಂದು ಜೋಶ್ ಕಾಣಲು ಚಿತ್ರರಸಿಕರು ಗಾಳಿಪಟ ಚಿತ್ರದವರೆಗೂ ಕಾಯಬೇಕಾಯಿತು. ಈ ನಡುವೆ ಆ ದಿನಗಳು ಚಿತ್ರವೂ ಯಶಸ್ಸನ್ನು ಕಂಡಿದೆ ಬಿಡಿ, ಆ ಮಾತು ಬೇರೆ.

ಈ ನಡುವೆ ಸತ್ಯ ಇನ್ ಲವ್ ಚಿತ್ರ ಬಿಡುಗಡೆಯಾಗಬೇಕಿತ್ತಾದರೂ ಅದು ಕಾರಣಾಂತರಗಳಿಂದ ಮುಂದೆ ಹೋಗಿದೆ. ಆ ಜಾಗದಲ್ಲಿಗ ಬಂದು ನಿಂತಿದೆ ಬೆಳದಿಂಗಳಾಗಿ ಬಾ ಚಿತ್ರ.

ಬೆಳದಿಂಗಳಾಗಿ ಬಾ ಹಲವು ಕಾರಣಗಳಿಗಾಗಿ ಉದ್ಯಮದ ಗಮನವನ್ನು ಸೆಳೆದಿದೆ. ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿಬಂದಿದ್ದು ಉದ್ಯಮದ ಮತ್ತು ಚಿತ್ರ ರಸಿಕರ ನೀರೀಕ್ಷೆ ಹೆಚ್ಚಾಗಲು ಅದು ಕಾರಣವಾಗಿದೆ. ವಾಹಿನಿಗಳಲ್ಲಿ ಈ ಚಿತ್ರದ ಹಾಡುಗಳು ಆಗಾಗ್ಗೆ ಮೂಡಿ ಬರುತ್ತಿದ್ದು ಅವುಗಳ ಚಿತ್ರೀಕರಣ ಎಲ್ಲರ ಗಮನವನ್ನೂ ಸೆಳೆದಿರುವುದು ನಿರೀಕ್ಷೆಯಲ್ಲಿನ ಹೆಚ್ಚಳಕ್ಕೆ ಕಾರಣ.

ಎಲ್ಲಕ್ಕಿಂತ ಮಿಗಿಲಾಗಿ ಈ ಚಿತ್ರ ಯಶಸ್ಸು ಕಾಣಬೇಕಿರುವುದು ನಾಯಕ ವಿಜಯ ರಾಘವೇಂದ್ರರ ಜರೂರತ್ತುಗಳಲ್ಲಿ ಒಂದೆಂದು ಹೇಳಬಹುದು. ಏಕೆಂದರೆ ಅತ್ಯುತ್ತಮ ಅಭಿನಯ, ಹಾಡುಗಳು, ನಿರ್ದೇಶನ, ಉತ್ತಮ ಕಥೆ ಇವೆಲ್ಲಾ ಇದ್ದೂ ಸಹ ಮತ್ತು ಯಶಸ್ವೀ ಪ್ರದರ್ಶನವನ್ನು ಕಾಣುತ್ತಿದ್ದರೂ ಸಹ ಅವರ ಕಲ್ಲರಳಿ ಹೂವಾಗಿ ಚಿತ್ರ ಕಳೆದ ವರ್ಷ ವಿನಾಕಾರಣ ಚಿತ್ರಮಂದಿರದಿಂದ ಹೊರಬರಬೇಕಾಯಿತು (ಇದಕ್ಕೆ ಬೇರೆಯದೇ ಆದ ಕಾರಣಗಳೂ ಇವೆ, ಆ ಮಾತು ಬೇರೆ). ಆದರೆ ಅದಾದ ನಂತರ ಅವರ ಚಿತ್ರಗಳಾವೂ ಅಷ್ಟೊಂದು ಯಶಸ್ವಿಯಾಗಿಲ್ಲ. ತೀರ ಇತ್ತೀಚೆಗೆ ಬಂದ ನಾನು ನೀನು ಜೋಡಿ ಚಿತ್ರವೂ ಅಷ್ಟೊಂದು ಪ್ರಭಾವ ಬೀರಲಿಲ್ಲ.

ಆದರೆ ಈ ಆತಂಕಗಳೆಲ್ಲಾ ಬೆಳದಿಂಗಳಾಗಿ ಬಾ ಚಿತ್ರದಿಂದ ದೂರವಾಗುವ ಎಲ್ಲ ಸಾಧ್ಯತೆಗಳಿವೆ. ಹೆಸರು ಹೇಳಲು ಬಯಸದ ಚಿತ್ರೋದ್ಯಮಿಯೊಬ್ಬರ ಪ್ರಕಾರ ಈ ಚಿತ್ರಕ್ಕೆ ಕಪಾಲಿ ಚಿತ್ರಮಂದಿರ ಸಿಕ್ಕಿರುವುದೇ ಚಿತ್ರದ ಪ್ಲಸ್ ಪಾಯಿಂಟ್ ಆಗಲಿದೆ. ರಮ್ಯ ತಾಣಗಳಲ್ಲಿ ಈ ಚಿತ್ರದ ಹಾಡುಗಳು ಚಿತ್ರೀಕರಣಗೊಂಡಿದ್ದು ಯಾವುದೋ ಕಿತ್ತುಹೋದ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುವಂತಾಗಿದ್ದರೆ, ಶ್ರಮವಹಿಸಿ ಚಿತ್ರೀಕರಿಸಿದ್ದೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗುತ್ತಿತ್ತು. ಚಿತ್ರಕ್ಕೆ ಯಾವ ಚಿತ್ರಮಂದಿರ ಸಿಕ್ಕಿದೆ ಎಂಬುದರ ಆಧಾರದ ಮೇಲೆ ಇದು ನಿಲ್ಲುವ ಚಿತ್ರವೋ, ತೇಲುವ ಚಿತ್ರವೋ ಅಥವಾ ಮುಳುಗುವ ಚಿತ್ರವೋ ಎಂಬುದನ್ನು ನಿರ್ಧರಿಸುವ ಕುರುಡು ಮೆಥಡ್(!!) ಒಂದನ್ನು ಪ್ರೇಕ್ಷಕ ಈಗಾಗಲೇ ಕಂಡುಕೊಂಡಿದ್ದಾನೆ. ಜೊತೆಗೆ ಚಿತ್ರದ ನಿರ್ಮಾಣದಲ್ಲಿ ಕಂಡುಬಂದಿರುವ ಶ್ರದ್ದೆ ಹಾಗೂ ವೃತ್ತಿಪರತೆಗಳು ಖಂಡಿತಾ ಚಿತ್ರಕ್ಕೆ ಉತ್ತಮ ಓಪನಿಂಗ್ ನೀಡಲಿವೆ ಎಂಬುದು ಅವರ ಅಭಿಪ್ರಾಯ.

ರಮಣೀತು ಚೌಧರಿ ಈ ಚಿತ್ರದ ನಾಯಕಿ. ಪಲ್ಲಕ್ಕಿ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರೂ ಅದು ವಿಫಲಗೊಂಡಿದ್ದರಿಂದ ಈಕೆಗೂ ಮೈಲೇಜ್ ಸಿಕ್ಕಿರಲಿಲ್ಲ. ಈಗ ಬೆಳದಿಂಗಳಾಗಿ ಬಾ ಚಿತ್ರಕ್ಕಾಗಿ ಒಂದೆರಡು ಸುತ್ತು ಮೈತೂಕ ಕಳೆದುಕೊಂಡು ಹೆಸರಿಗೆ ತಕ್ಕಂತೆ ರಮಣೀಯವಾಗಿಯೇ ಆಕೆ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ನೆರವಾಗಲಿದೆ ಎಂಬುದು ಈಗಾಗಲೇ ಚಿತ್ರದ ರಶಸ್ ನೋಡಿರುವವರ ಅಭಿಪ್ರಾಯ.

ಹಾಗಿದ್ದಲ್ಲಿ ಆಲ್ ದ ಬೆಸ್ಟ್ ಎನ್ನಲು ಸಂಕೋಚವೇಕೆ?