ಇಂತಿ ನಿನ್ನ ಪ್ರೀತಿಯ
ಬೆಂಗಳೂರು, ಬುಧವಾರ, 27 ಫೆಬ್ರವರಿ 2008( 15:22 IST )
ಹಲವು ಪ್ರತಿಭಾವಂತರು ಸೇರಿ ಸೃಷ್ಟಿಸುವ ಕೃತಿ ಖಂಡಿತಾ ಯಶಸ್ಸನ್ನು ಕಾಣುತ್ತದೆ ಎಂಬುದಕ್ಕೆ ಮುಂಗಾರು ಮಳೆ ಹಾಗೂ ದುನಿಯಾ ಚಿತ್ರಗಳು ಸಾಕ್ಷಿ. ಆದರೆ ಪ್ರತಿಭಾವಂತರೆನಿಸಿಕೊಂಡವರಲ್ಲಿ ಇಗೋ ತುಂಬಿಕೊಂಡಿದ್ದರೆ ಅದ್ಬುತ ಸೃಷ್ಟಿ ಎನಿಸಿಕೊಳ್ಳಬೇಕಾದಂಥಾದ್ದೂ ಹಳ್ಳಕ್ಕೆ ಬೀಳುತ್ತದೆ. ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದು.
ಈಗಾಗಲೇ ಮುಂಗಾರುಮಳೆಯ ನಂತರ ಗಾಳಿಪಟ ಚಿತ್ರವನ್ನೂ ನೀಡಿ, ತಮ್ಮ ಯಶಸ್ಸು ಫ್ಲೂಕ್ ಅಲ್ಲ ಎಂಬುದನ್ನು ಯೋಗಿರಾಜಭಟ್ಟರು ಸಾಬೀತುಪಡಿಸಿದ್ದಾರೆ. ಈಗಿನದು ದುನಿಯಾ ಸೂರಿಯ ಸರದಿ. ದುನಿಯಾ ಚಿತ್ರದ ಕುರಿತು ಮುಂಗಾರುಮಳೆ ಯೋಗಿರಾಜಭಟ್ಟರು ಮಾತನಾಡುತ್ತಾ, ನಿಜವಾಗಿ ಹೇಳಬೇಕೆಂದಿದ್ದರೆ ಮುಂಗಾರು ಮಳೆಗಿಂತ ದುನಿಯಾ ಗಟ್ಟಿ ಚಿತ್ರ ಎಂದಿದ್ದರು. ಇದು ಸೂರಿಗೆ ಸಿಕ್ಕ ಸರ್ಟಿಫಿಕೇಟೂ ಆಗಿತ್ತು.
ಈಗ ಇಂತಿ ನಿನ್ನ ಪ್ರೀತಿಯ ಚಿತ್ರ ಬಿಡುಗಡೆಯ ಹಂತಕ್ಕೆ ಬರುವುದರೊಂದಿಗೆ ಸೂರಿ ಮತ್ತೊಂದು ಪರೀಕ್ಷೆಗೆ ಸಿದ್ಧರಾಗಬೇಕಿದೆ. ತಮ್ಮ ಯಶಸ್ಸೂ ಫ್ಲೂಕ್ ಅಲ್ಲ ಎಂಬುದನ್ನು ಅವರು ಸಾಬೀತುಪಡಿಸಬೇಕಿದೆ. ಇದು ಅವರಿಗೊಬ್ಬರಿಗೇ ಅಲ್ಲ ನಾಯಕನಟ ಶ್ರೀನಗರ ಕಿಟ್ಟಿಗೂ ಪರೀಕ್ಷೆಯ ಚಿತ್ರ. ಈ ಅಂಕಣದಲ್ಲಿ ಈಗಾಗಲೇ ತಿಳಿಸಿರುವಂತೆ ಚಿತ್ರದ ಪ್ರಮೋಗಳು, ಪೋಸ್ಟರ್‌ಗಳು ಅದ್ಬುತವಾಗಿದ್ದು ದಾರಿಹೋಕರನ್ನು ಸೆಳೆಯುವಂತಿವೆ.
ಚಿತ್ರದ ಹಾಡುಗಳ ವಿಷಯವನ್ನಂತೂ ಹೇಳುವುದೇ ಬೇಡ. ಭೂಪೇನ್ ಹಜಾರಿಕಾ ಹಾಡಿರುವ ದಿಲ್ ಹೂಂ ಹೂಂ ಕರೇ ಎಂಬ ಹಿಂದಿ ಹಾಡು ಮತ್ತು ನಾಗಮಂಡಲ ಚಿತ್ರದ ಈ ಹಸಿರು ಸಿರಿಯಲಿ ಹಾಡನ್ನು ಕೊಂಚಮಟ್ಟಿಗೆ ಹೋಲುತ್ತದೆ ಎಂಬುದನ್ನು ಬಿಟ್ಟರೆ ಮಧುವನ ಕರೆದರೆ ಎಂಬ ಹಾಡು ಸೂಪರ್‌ಹಿಟ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಮೊದಲ ಬಿಡುಗಡೆಯಲ್ಲಿಯೇ ಚಿತ್ರ ಸಾಕಷ್ಟು ಹೆಚ್ಚಿನ ಸಂಖ್ಯೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾದರೆ ಅದು ಸೂಪರ್ ಚಿತ್ರ ಎಂಬ ಸೈಕಾಲಜಿಕಲ್ ಫೀಲಿಂಗ್ ಪ್ರೇಕ್ಷಕರಲ್ಲಿದೆ. ಈ ನಿಟ್ಟಿನಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರ ಈ ಒಪೀನಿಯನ್ ನೆರವಾಗಬಲ್ಲದು.
ಮಿಕ್ಕ ವಿಷಯ ಎಕ್ಸಿಟ್ ಪೋಲ್ ಸಮಯದಲ್ಲಿ.