ನಂದ ಲವ್ಸ್ ನಂದಿತಾ
ಬೆಂಗಳೂರು, ಬುಧವಾರ, 12 ಮಾರ್ಚ್ 2008( 18:19 IST )
ಚಿತ್ರಗಳು ಸಾಮಾನ್ಯವಾಗಿ ಬಿಡುಗಡೆಯಾಗುವುದು ಶುಕ್ರವಾರದಂದು. ಆದರೆ ಆ ನಿಯಮವನ್ನು ಮುರಿದು, ನಂದ ಲವ್ಸ್ ನಂದಿತಾ ಚಿತ್ರ ನಾಳೆಯೇ (ಗುರುವಾರ) ಬಿಡುಗಡೆಯಾಗುತ್ತಿದೆ ಎಂಬುದು ಒಂದು ವಿಶೇಷವಾದರೆ, ಘಟಾನುಘಟಿಗಳಿಗೇ ಸಿಕ್ಕದ ಕಪಾಲಿ ಚಿತ್ರಮಂದಿರ ಹೊಸ ಹುಡುಗರ ಚಿತ್ರಕ್ಕೆ ಸಿಕ್ಕಿರುವುದು ಸಂತೋಷದ ವಿಷಯವೆನ್ನಬಹುದು.
ಗಾಳಿಪಟ ಚಿತ್ರದ ಶೀರ್ಷಿಕೆಯ ಕೆಳಗೆ ಮುಗಿಲಂಚಿನಲ್ಲೊಂದು ಮೊಹಬ್ಬತ್ ಎಂಬ ಅಡಿಬರಹ ನೀಡಲಾಗಿತ್ತು. ನಂದ ಲವ್ಸ್ ನಂದಿತ ಚಿತ್ರದ ಶೀರ್ಷಿಕೆಯಡಿಯಲ್ಲಿ ಪಾತಕ ಲೋಕದಲ್ಲೊಂದು ಮೊಹಬ್ಬತ್ ಎಂಬ ಅಡಿಬರಹವನ್ನು ನೀಡಲಾಗಿದೆ. ಅಲ್ಲಿಗೆ ಇದೊಂದು ಮಚ್ಚು ಮತ್ತು ಲವ್-ಸೆಂಟಿಮೆಂಟುಗಳ ಚಿತ್ರ ಎಂಬುದು ಢಾಳಾಗಿ ಗೋಚರಿಸುತ್ತಿದೆ.
ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲಿ ಲೂಸ್ ಮಾದ ಪಾತ್ರದಲ್ಲಿ ಗಮನ ಸೆಳೆದಿದ್ದ ಯೋಗೀಶ್ ಈ ಚಿತ್ರದ ನಾಯಕ. ಟಿವಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿರುವ ಶ್ವೇತ ನಾಯಕಿ. ಚಿತ್ರದ ಪ್ರಮೋಗಳು ಈಗಾಗಲೇ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿವೆ. ಖ್ಯಾತ ಸಂಗೀತ ನಿರ್ದೇಶಕರುಗಳಾದ ಎ.ಆರ್.ರೆಹಮಾನ್ ಹಾಗೂ ಜೆಸ್ಸಿ ಗಿಫ್ಟ್‌ರವರ ಬಳಿ ಸಹಾಯಕರಾಗಿದ್ದ ಎಮಿಲ್ ಈ ಚಿತ್ರದ ಸಂಗೀತ ನಿರ್ದೇಶಕರು. ನಾಯಕಿಯನ್ನು ನಾಯಕ ಜಿಂಕೆಮರಿಯೆಂದು ಛೇಡಿಸುವ ಗೀತೆಯೊಂದಕ್ಕೆ ಎಮಿಲ್ ಉತ್ತಮ ಸಂಗೀತ ನೀಡಿದ್ದು ಅದು ಈಗಾಗಲೇ ಚಿತ್ರ ಚಿತ್ರದ ಜಿಂಕೆ ಮರಿ ಬತ್ತೈತೆ ನೊಡ್ಲಾ ಮಗಾ ಹಾಡಿನಷ್ಟೇ ಪಾಪ್ಯುಲರ್ ಆಗಿದೆ. ಚಿತ್ರದ ಕ್ರೋಡ್ಪುಲ್ಲಿಂಗ್ ಫ್ಯಾಕ್ಟರ್ ಕೂಡಾ ಇದೇ ಆಗಬಹುದು ಎಂಬುದು ನಿರ್ಮಾಪಕರ ನೀರೀಕ್ಷೆ.
ರಾಮ್‌ಕುಮಾರ್ ಅಭಿನಯದ ಗೆಜ್ಜೆನಾದ ಹಾಗೂ ವಿನೋದ್‌ರಾಜ್ ಅಭಿನಯದ ಕನ್ನಡದ ಕಂದ ಎಂಬೆರಡು ಯಶಸ್ವಿ ಚಿತ್ರಗಳ ಕಾರಣಕರ್ತರಾಗಿರುವ ವಿಜಯ್‌ಕುಮಾರ್ ಈ ಚಿತ್ರದ ಮೂಲಕ ತಮ್ಮ ಜೈತ್ರಯಾತ್ರೆಯನ್ನು ಮುಂದುವರಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ. ಕಥೆ-ಚಿತ್ರಕಥೆಗಳ ರಚನೆಯಲ್ಲಿ ಉದ್ಯಮದವರ ಡಾರ್ಲಿಂಗ್ ಆಗಿರುವ ಅಜಯ್‌ಕುಮಾರ್ ಈ ಚಿತ್ರದ ಬೆನ್ನೆಲುಬಾಗಿದ್ದು ಅವರ ಕೆಲಸ ಎಲ್ಲರ ಮೆಚ್ಚುಗೆಯನ್ನು ಪಡೆದಿದೆ ಎಂಬುದು ಗಾಂಧಿನಗರದ ಗಲ್ಲಿಗಳಲ್ಲೀಗ ಸುದ್ದಿ. ಈ ಚಿತ್ರದ ನಂತರ ಲೂಸ್ ಮಾದ ಯೋಗೀಶ್ ಹಾಗೂ ಶ್ವೇತಾಗೆ ಮತ್ತಷ್ಟು ಅವಕಾಶಗಳ ಸುರಿಮಳೆಯಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತದೆ ಚಿತ್ರತಂಡ.
“Fieldನಲ್ಲಿ ಇರೋರು Love ಮಾಡ್ಬಾರ್ದೂಂತ ಯಾವ ರೌಡೀನೂ ಶಾಸನ ಬರ್ದಿಟ್ಟಿಲ್ಲ ಎಂಬ ತಲೆಬರಹ ಚಿತ್ರದ ಶೀರ್ಷಿಕೆಯ ಮೇಲೆ ಢಾಳಾಗಿ ಗೋಚರಿಸುತ್ತದೆ. ಹಾಗಿರುವಾಗ ಯೋಗೀಶ್ ಹಾಗೂ ಶ್ವೇತಾರಿಗೆ ಅವಕಾಶಗಳ ಸುರಿಮಳೆಯಾಗ್ಬಾರ್ದು ಅಂತಾನೂ ಯಾವ ಶಾಸನಾನೂ ಇಲ್ಲ.
ಅಲ್ವಾ...?!!