ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಮೊಗ್ಗಿನ ಮನಸು
ಸಿನಿಮಾ ಮುನ್ನೋಟ
Feedback Print Bookmark and Share
 
ಮುಂಗಾರು ಮಳೆ ನಂತರ ಇ.ಕೃಷ್ಣಪ್ಪನವರ ಬ್ಯಾನರ್‌ನಿಂದ ಬರುತ್ತಿರುವ ಚಿತ್ರ ಮೊಗ್ಗಿನ ಮನಸು. ಈ ಚಿತ್ರ ವೀಕ್ಷಿಸುವುದರಿಂದ ಹುಡುಗರ ಹೃದಯಕ್ಕೆ ಹಾನಿಯಾಗಬಹುದು ಎಂಬ ಎಚ್ಚರಿಕೆಯನ್ನು ಚಿತ್ರದ ಶೀರ್ಷಿಕೆಯ ಕೆಳಗೆ ನೀಡಲಾಗಿದೆ. ಅಷ್ಟೇ ಅಲ್ಲ, ಹುಡುಗಿಯರಿಗಾಗಿ ಒಂದು ವಿಶೇಷ ಚಿತ್ರ ಎಂಬ ತಲೆಬರಹವೂ ಚಿತ್ರಕ್ಕಿದೆ.

ಈ ಎಲ್ಲಾ ಅಂಶಗಳೊಂದಿಗೆ ಇತರ ವಿಷಯಗಳನ್ನೂ ಪರಿಗಣಿಸುವುದಾದರೆ ಮೊಗ್ಗಿನ ಮನಸು ನಿಜಕ್ಕೂ ಬಹು ನೀರೀಕ್ಷಿತ ಚಿತ್ರ. ಕಾರಣ ಇದರಲ್ಲಿರುವ ಹತ್ತು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಮನೋಮೂರ್ತಿಯವರು ಈ ಚಿತ್ರದ ಹಾಡುಗಳ ಚಿತ್ರೀಕರಣ, ಸಾಹಸ ಸಂಯೋಜನೆ ಎಲ್ಲವನ್ನೂ ಇಷ್ಟಪಟ್ಟಿರುವುದು. ಯುವ ಹೃದಯಗಳ ಚಿತ್ರವಾದರೂ ಇದಕ್ಕೆ ಸೆನ್ಸಾರ್ ಮಂಡಳಿ ಎ ಪ್ರಮಾಣಪತ್ರವನ್ನು ನೀಡಿದೆ. ಹದಿನೆಂಟೂ ತುಂಬದವರ ಲವ್‌ಸ್ಟೋರಿ ಚಿತ್ರವಾದ್ದರಿಂದ ಹೀಗೆ ಮಾಡಬೇಕಾಯಿತು ಎಂಬುದು ಅವರ ಸಮಜಾಯಿಷಿ. ಆದರೆ ನಿರ್ದೇಶಕ-ನಿರ್ಮಾಪಕರ ಪ್ರಕಾರ ಚಿತ್ರದಲ್ಲಿ ಎ ಪ್ರಮಾಣಪತ್ರ ಕೊಡುವಂತಹಾ ಅಂಶಗಳೇನೂ ಇಲ್ಲ.

ಅದೇನೇ ಇರಲಿ, ಇಡೀ ಚಿತ್ರವನ್ನು ಡಿಜಿಟಲ್ ಇಂಟರ್ ಮೀಡಿಯೇಟ್ ಸ್ವರೂಪದಲ್ಲಿ ತರುವ ದೃಷ್ಟಿಯಿಂದ ನಿರ್ದೇಶಕ ಶಶಾಂಕ್ ಹೆಚ್ಚಿನ ಶ್ರಮವಹಿಸಿದ್ದಾರಂತೆ. ಸಿನಿಮಾದ ಒಂದೊಂದು ಫ್ರೇಮೂ ಸುಂದರವಾಗಿ ಮೂಡಿಬಂದಿದೆ ಎಂಬುದು ಅವರ ಅಭಿಪ್ರಾಯ. ಈ ಹಿಂದೆ ಈ ಚಿತ್ರವನ್ನು ರಾಮೋಜಿರಾವ್ರವರಿಗಾಗಿ ನಿರ್ದೇಶಿಸಬೇಕಿತ್ತು. ಆದರೆ ಬಜೆಟ್ ಕಾರಣದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ಸಿದ್ಧಸೂತ್ರಗಳ ಸಿಕ್ಸರ್ ಚಿತ್ರವನ್ನು ಮಾಡಿಕೊಡಬೇಕಾಗಿ ಬಂತು. ಆದರೆ ಇ.ಕೃಷ್ಣಪ್ಪ ದುಡ್ಡುಹಾಕಲು ಹಿಂದೆ ಮುಂದೆ ನೋಡಲಿಲ್ಲವಾದ್ದರಿಂದ ಮೊಗ್ಗಿನ ಮನಸು ಅವರ ಪಾಲಾಗಿದೆ ಎನ್ನುತ್ತಾರೆ ಶಶಾಂಕ್.

ಕಲಾತ್ಮಕ ಅಥವಾ ಕಮರ್ಷಿಯಲ್ ಎರಡೂ ಅಲ್ಲದ ಸ್ಟೈಲಿಶ್ ರೋಮ್ಯಾಂಟಿಕ್ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆಯಂತೆ. ಚಿತ್ರದ ಮೊದಲ ಪ್ರತಿ ನೋಡಿದವರೆಲ್ಲಾ ಇದೇ ಮಾತನ್ನು ಹೇಳುತ್ತಿದ್ದಾರಂತೆ. ಒಟ್ಟು 30 ಪ್ರಿಂಟ್‌ಗಳೊಂದಿಗೆ 40 ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಮೊಗ್ಗಿನ ಮನಸು ಟೀನೇಜ್ ಹುಡುಗಿಯರ ಕನಸುಗಳು, ಗೊಂದಲಗಳ ಸುತ್ತ ಸಾಗುವ ಕಥೆಯನ್ನು ಹೊಂದಿದೆಯಂತೆ. ಹುಡುಗಿಯರು, ಹುಡುಗಿಯರ ಮನಸ್ಸನ್ನು ಅರಿಯಬೇಕಾದ ಹುಡುಗರು ಮತ್ತು ಹುಡುಗ-ಹುಡುಗಿಯರ ಅಪ್ಪ ಅಮ್ಮಂದಿರು ಚಿತ್ರವನ್ನು ನೋಡಲೇಬೇಕಂತೆ.

ಮೊಗ್ಗಿನ ಮನಸು ಕಾಣಲಿ ಯಶಸ್ಸು ಎಂಬುದೇ ನಮ್ಮ ವಿಶಸ್ಸು..!!