ತೆರೆಗೇರಲು ಸಿದ್ಧವಿರುವ ಮೊಗ್ಗಿನ ಜಡೆ
ಬುಧವಾರ, 16 ಏಪ್ರಿಲ್ 2008( 14:47 IST )
ಚಿತ್ರ: ಮೊಗ್ಗಿನ ಜಡೆ
ವರ್ಷದ ಹಿಂದೆ ಆರಂಭವಾಗಿ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಅನುಮಾನವಿದ್ದ 'ಮೊಗ್ಗಿನ ಜಡೆ' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಪಿ.ಆರ್. ರಾಮದಾಸ್ ನಾಯ್ಡು ನಿರ್ದೇಶನದ ಈ ಚಿತ್ರ ಈಗಾಗಲೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಆದರೆ ಅಧಿಕೃತವಾಗಿ ಈ ವಾರ ಬಿಡುಗಡೆಯಾಗುತ್ತಿದೆ.
ಮೊಗ್ಗಿನ ಜಡೆ ಒಂದು ಕಲಾತ್ಮಕ ಚಿತ್ರ. ನಗರ ಜೀವನದ ಮೇಲೆ ಜಾಗತೀಕರಣ ಬೀರುವ ಪರಿಣಾಮಗಳನ್ನು ಚಿತ್ರ ಒಳಗೊಂಡಿದೆ. ಮೊಗ್ಗಿನ ಜಡೆಯಲ್ಲಿ ಮಾಸ್‌ಗೆ ಇಷ್ಟವಾಗುವ ಅಂಶಗಳು ಕೂಡಾ ಇವೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಪಾಶ್ಚಾತ್ಯೀಕರಣ ಬೀರುತ್ತಿರುವ ಪ್ರಭಾವ, ಇದರಿಂದ ನಮ್ಮ ಯುವಜನಾಂಗ ಎತ್ತ ಸಾಗುತ್ತಿದೆ ಎಂಬುದು ನಾವು ಗ್ರಹಿಸಿದ ರೀತಿಯಲ್ಲಿ ಇರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ನಾಯ್ಡು ಅವರಿಗೆ ಈ ಚಿತ್ರ ಮಾಡಲು ಇರಾನಿಯನ್ ಚಿತ್ರವೊಂದು ಸ್ಫೂರ್ತಿಯಂತೆ. ಇರಾನಿಯನ್ ಚಿತ್ರಗಳು ತಮ್ಮ ಇತಿಮಿತಿಗಳ ಮಧ್ಯೆಯೂ ಸಾಂಸ್ಕೃತಿಕ ಹಿನ್ನೆಲೆಯನ್ನು ಬಿಟ್ಟುಕೊಡದೇ ತಯಾರಾಗುತ್ತವೆ ಎಂದು ಹೇಳುತ್ತಾರೆ ನಿರ್ದೇಶಕ ರಾಮದಾಸ್ ನಾಯ್ಡು.
ಮಚ್ಚು ಲಾಂಗು ಹಾಗೂ ಬರೀ ಪ್ರೇಮಕಥೆಗಳದ್ದೇ ಚಿತ್ರ ಬರುತ್ತಿರುವ ಕಾಲದಲ್ಲಿ ಒಂದು ಸೃಜನಾತ್ಮಕ ಚಿತ್ರ ತಯಾರಿಸಿದ್ದಾರೆ ರಾಮ್ದಾಸ್ ನಾಯ್ಡು. ಇಬ್ಬರು ಪುಟ್ಟ ಮಕ್ಕಳೇ ತಮ್ಮ ಚಿತ್ರದಲ್ಲಿನ ಹೀರೋ ಹೀರೋಯಿನ್ ಎನ್ನುತ್ತಾರೆ ಅವರು.
ಮೊಗ್ಗಿನ ಜಡೆ ಈಗಾಗಲೇ ಭಾರತದ ಆರು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಮುಂದಿನ ತಿಂಗಳು ನಡೆಯಲಿರುವ ಕೇರಳ ರಾಜ್ಯ ಸರ್ಕಾರದ ಚಲನಚಿತ್ರೋತ್ಸವದಲ್ಲಿಯೂ ಅದು ಮೂರು ಪ್ರದರ್ಶನ ಕಾಣಲಿದೆ. ಚಿತ್ರಕ್ಕೆ ಎಲ್. ವೈದ್ಯನಾಥನ್ ಸಂಗೀತ ನೀಡಿದ್ದಾರೆ. ಪವಿತ್ರಾ ಲೋಕೇಶ್, ಬೇಬಿ ಶ್ರೀಷಾ ಚಿತ್ರದ ಉಳಿದ ತಾರಾಗಣದಲ್ಲಿರುವ ಪ್ರಮುಖರು.