ಬಾಬಾ
ಬೆಂಗಳೂರು, ಗುರುವಾರ, 8 ಮೇ 2008( 15:16 IST )
ಎರಡು ವಾರಗಳ ಹಿಂದೆಯೇ ತೆರೆ ಕಾಣಬೇಕಿದ್ದ ಬಾಬಾ ಚಿತ್ರ ಈ ವಾರ ತೆರೆ ಕಾಣುತ್ತಿದೆ. 18 ವರ್ಷದ ಯುವಕ ಮಚ್ಚು ಹಿಡಿದು ಕೊಚ್ಚುವ ದೃಶ್ಯ ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಚಿತ್ರವನ್ನು ಬಿಡುಗಡೆ ಮಾಡದೇ ಸಮಾಜಕ್ಕೆ ಉಪಕಾರ ಮಾಡಿ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಾಬಾ ಚಿತ್ರದ ನಿರ್ಮಾಪಕ ಶೋಭಾ ರಾಜಣ್ಣ ಅವರಿಗೆ ಹೇಳಿದರಂತೆ.
ಕೊನೆಗೆ ಸೆನ್ಸಾರ್ ಮಂಡಳಿಯನ್ನು ಕಾಡಿಬೇಡಿದ ನಂತರ ಈ ವಾರ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಚಿತ್ರದಲ್ಲಿ 22 ವರ್ಷದ ಯುವಕ ಲಾಂಗ್ ಹಿಡಿದು ಹೋರಾಡುವ ದೃಶ್ಯವಿದೆ. ಚಿತ್ರದಲ್ಲಿ ಎಸ್ಎಸ್ಎಲ್‌ಸಿ ಫೇಲ್ ಆದ ಹುಡುಗನಿಗೆ ಮುಂದೆ ಓದಬೇಕು ಎಂಬ ಆಸೆ ಇರುತ್ತದೆ. ಆದರೆ ಆತನ ಹದಿಹರೆಯ ಬಿಡಬೇಕೆ. ಆತ ಪ್ರೀತಿಯ ಬಲೆಗೆ ಬೀಳುತ್ತಾನೆ. ಇದು ಚಿತ್ರದ ಕಥಾಹಂದರ. ಪ್ರೀತಿಗಾಗಿ ಪ್ರಾಣ ಕೊಡಲು ಹಾಗೂ ಪ್ರಾಣ ತೆಗೆಯಲು ಸಿದ್ಧನಿರುತ್ತಾನೆ. ಇಲ್ಲಿ ಸೆಕೆಂಡ್ ಪಿಯುಸಿ ಓದುತ್ತಿರುವ ಕಾರ್ತೀಕ್ ನಾಯಕನಾಗಿ ಲಾಂಗ್ ಹಿಡಿದು ಕೊಚ್ಚಿದ್ದಾರೆ.
ಚಿತ್ರದಲ್ಲಿ ಅಪ್ಪ-ಮಗನ ಸಂಬಂಧ ತುಂಬಾ ಸೆಂಟಿಮೆಂಟ್ ಆಗಿದೆಯಂತೆ. ಬೇಜವಾಬ್ದಾರಿ ಮಗನಿಗೆ ತಂದೆ ಬೈಯುತ್ತಾನೆ. ಆದರೆ ಇಲ್ಲಿ ಮಾತ್ರ ತಂದೆ ತನ್ನ ಮೌನದಿಂದಲೇ ಮಗನನ್ನು ತಿದ್ದುತ್ತಾನೆ. ಚಿತ್ರದಲ್ಲಿ ರಮೇಶ್ ಭಟ್ ಅಪ್ಪನ ಪಾತ್ರ ನಟಿಸಿದ್ದಾರೆ. ಇವರು ಶಿವಮಣಿ ಚಿತ್ರದಲ್ಲೂ ಇದೇ ರೀತಿಯ ಸೆಂಟಿಮೆಂಟ್ ಅಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕ ತ್ರಿಶೂಲ್ ಈ ಚಿತ್ರದ ಬಗ್ಗೆ ನೀರೀಕ್ಷೆ ಇಟ್ಟುಕೊಂಡಿದ್ದಾರೆ. ಅಭಿನಯ ಕಲಿಯುವಾಗ ನಾನು ನಟನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಅದೃಷ್ಟಕ್ಕೆ ನಾಯಕನಾದೆ ಎಂದರು ಕಾರ್ತೀಕ್. ಚಿತ್ರದಲ್ಲಿ ಪ್ರಜ್ಞಾ ನಾಯಕಿಯಾಗಿ ನಟಿಸಿದ್ದಾರೆ. ತೆರೆಯ ಮೇಲೆ ಬಾಬಾನ ಮೋಡಿಯನ್ನು ನೋಡಬೇಕು.