ನಟ ಶಿವಧ್ವಜ್ ಮೊದಲ ಬಾರಿಗೆ ನಿರ್ದೇಶನ ಮಾಡಿದ "ನೀನೇ ನೀನೇ'' ಚಿತ್ರ ನಾಳೆ (ಶುಕ್ರವಾರ) ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನೀರೀಕ್ಷೆ ಮೂಡಿದೆ. ಇದೊಂದು ಸಾಮಾನ್ಯ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಘಟನೆ. ಅದನ್ನು ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗಿದೆ.
MOKSHA
ಹೆಚ್ಚಿನ ಚಿತ್ರಗಳಲ್ಲಿ ಯುವಕರು ಅತಿಯಾದ ತಲೆಬಿಸಿಯಾದಾಗ ಬಾರ್‌ಗೆ ಹೋಗಿ ಕುಡಿಯುವ ದೃಶ್ಯ ಸಾಮಾನ್ಯವಾಗಿರುತ್ತದೆ. ಆದರೆ ಈ ಚಿತ್ರದಲ್ಲಿ ತಲೆಬಿಸಿಯಾದಾಗ ಕಾಫಿ ಡೇಗೆ ಬಂದು ಕಾಫಿ ಕುಡಿಯುವ ದೃಶ್ಯವನ್ನು ತೋರಿಸಿದ್ದಾರಂತೆ. ಇದೊಂದು ಹೊಸ ಬೆಳವಣಿಗೆ ಎನ್ನುತ್ತಾರೆ ನಿರ್ದೇಶಕ ಶಿವಧ್ವಜ್.
ಇಲ್ಲಿ ಮುಖ್ಯವಾಗಿ ಬಿಡುವಿಲ್ಲದೆ ತಮ್ಮ ಖಾಸಗಿ ಜೀವನವನ್ನು ಮರೆತು ಕೆಲಸ ಮಾಡುವ ಐಟಿ, ಸಾಫ್ಟವೇರ್ ಉದ್ಯೋಗಿಗಳನ್ನು ಗಮನದಲ್ಲಿರಿಸಿ ಚಿತ್ರ ಮಾಡಲಾಗಿದೆ. ಒಂದಿಷ್ಟು ನೆಮ್ಮದಿಯ ಜೀವನ ನಡೆಸಲು ಬೇಕಾದ ಸೂತ್ರಗಳನ್ನು ಈ ಚಿತ್ರದ ಮೂಲಕ ನೀಡುತ್ತಿದ್ದಾರೆ. ಇದು ಬೆಂಗಳೂರು ಮಂದಿಯನ್ನು ಹೆಚ್ಚಾಗಿ ಗಮನದಲ್ಲಿರಿಸಿದ ಚಿತ್ರವಾದ್ದರಿಂದ ಹೆಚ್ಚಾಗಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಚಿತ್ರಕ್ಕೆ ನೈಜತೆ ಬರಲು ನಗರದ ಸಾಫ್ಟವೇರ್ ಕಂಪೆನಿಯೊಂದರಲ್ಲಿ ಚಿತ್ರೀಕರಿಸಲಾಗಿದೆ.
ಯುವಕರು ಜೀವನದಲ್ಲಿ ಒಂದು ಗುರಿಯಿಲ್ಲದೇ ಮುಂದೆ ಸಾಗಿದರೆ ಏನಾಗುತ್ತದೇ, ಪಾಲಕರು ತಮ್ಮ ಹರೆಯದ ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದರೆ ಆಗುವ ಅನಾಹುತಗಳನ್ನು ಕೂಡಾ ಚಿತ್ರ ಒಳಗೊಂಡಿದೆ ಎನ್ನುತ್ತಾರೆ ಶಿವಧ್ವಜ್.
ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಛಾಯಾಗ್ರಾಹಣ ನೀಡಿದ್ದು, ಶ್ರೀಮುರಳಿ ಸಂಗೀತ ಸಂಯೋಜಿಸಿದ್ದಾರೆ. ಇದು ಮುಖ್ಯವಾಗಿ ಐಟಿ, ಎಂಎನ್‌ಸಿ, ಬಿಪಿಒ ಉದ್ಯೋಗಿಗಳು ನೋಡಲೇ ಬೇಕಾದ ಚಿತ್ರ ಎನ್ನುತ್ತಾರೆ ಶಿವಧ್ವಜ್. ಚಿತ್ರದ ನಿರ್ಮಾಪಕ ಬಸವರೆಡ್ಡಿ ಚಿತ್ರವನ್ನು ಆಸ್ಟ್ರೇಲಿಯಾ, ಸೇರಿದಂತೆ ಇತರ ಎರಡು ದೇಶಗಳಲ್ಲಿ ಬಿಡುಗಡೆಗೊಳಿಸುವುದರ ಜೊತೆಗೆ ದೆಹಲಿ, ಪುಣೆಗಳಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಚಾಕಲೇಟ್ ಹೀರೋ ಧ್ಯಾನ್ ಹಾಗೂ ನಾಯಕಿಯಾಗಿ ಐಶ್ವರ್ಯ ನಾಗ್ ನಟಿಸಿದ್ದಾರೆ. ಚಿತ್ರ ಬ್ಯಾನರ್‌ನಲ್ಲಿ ಪ್ರೀತ್ಸೋರಿಗೆ, ಪ್ರೀತ್ಸಿ ಮದ್ವೆ ಆಗೋರಿಗೆ, ಮದ್ವೆ ಆಗಿ ಪ್ರೀತ್ಸೋರಿ...ಎಂಬ ವಾಕ್ಯ ರಾರಾಜಿಸುತ್ತಿದೆ.
ಚಿತ್ರ ನೋಡಿ, ಚಿತ್ರವನ್ನು ಮನಸ್ಸಲ್ಲಿ ತುಂಬಿಸಿಕೊಂಡು ಬರಬಹುದು ಎನ್ನುತ್ತಾರೆ ಶಿವಧ್ವಜ್.