ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಚಿತ್ರ ನಿಧಾನವಾಗಿ ತನ್ನ ಚಿತ್ರೀಕರಣವನ್ನು ಮುಗಿಸಿ ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿದ್ಧವಾಗಿದೆ.
ಚಿ. ಗುರುದತ್ ನಿರ್ದೇಶನದ ಕಾಮಣ್ಣನ ಮಕ್ಕಳು ಈ ವಾರ ಬಿಡುಗಡೆಗೊಳ್ಳಲಿರುವ ಚಿತ್ರ. ಚಿತ್ರ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಚಿತ್ರದಲ್ಲಿ ಸುದೀಪ್, ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಮೂವರು ಒಟ್ಟಾದರೆ ಮತ್ತೆ ಚಿತ್ರದ ಹಾಸ್ಯದ ಬಗ್ಗೆ ಹೇಳಬೇಕಾಗಿಲ್ಲ. ಚಿತ್ರದ ಪಾತ್ರವೊಂದರಲ್ಲಿ ಸಾಧು ಕೋಕಿಲ ಕೂಡಾ ನಟಿಸಿದ್ದಾರೆ.
ಚಿತ್ರದ ಹೆಸರು ಕೇಳುವಾಗ ಇದೊಂದು ಆಶ್ಲೀಲ ಚಿತ್ರ ಎಂಬ ಭಾವನೆ ಮೂಡುತ್ತದೆ. ಆದರೆ ಚಿತ್ರದ ಒಳಗೆ ಸ್ವಲ್ಪ ಇಣುಕಿದರೆ ಅದರ ಬಗ್ಗೆ ನಮಗೆ ಗೊತ್ತಾಗುತ್ತದೆ ಎನ್ನುತ್ತಾರೆ ಗುರುದತ್. ಸುದೀಪ್ ಹಾಗೂ ರಾಕ್ಲೈನ್ ವೆಂಕಟೇಶ್ ಜೊತೆ ಚಿತ್ರ ಮಾಡಲು ಸಂತಸವಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.
ಇಲ್ಲಿ ಕಾಮಣ್ಣ ಎನ್ನುವುದು ವ್ಯಕ್ತಿಯೊಬ್ಬರ ಹೆಸರು. ಅವರಿಗೆ ಇಬ್ಬರು ಮಕ್ಕಳು. ಅವರು ಇಬ್ಬರು ತರ್ಲೆಗಳು. ಇವರ ನಡುವೆ ನಡೆಯುವ ಹಾಸ್ಯವನ್ನೇ ಒಂದು ಚಿತ್ರವನ್ನಾಗಿ ಮಾಡಲಾಗಿದೆ. ಚಿತ್ರದಲ್ಲಿ ಪೂಜಾಗಾಂಧಿ ನಾಯಕಿಯಾಗಿ ನಟಿಸಿದ್ದಾರೆ. ಕಾಮಣ್ಣ ಮಕ್ಕಳು ತೆರೆಯ ಮೇಲೆ ಯಾವ ರೀತಿ ರಾರಾಜಿಸುತ್ತಾರೆ ಎಂದು ನೋಡಬೇಕು.