ಒಂದು ವರ್ಷದ ಹಿಂದೆ ಮುಹೂರ್ತ ಆಚರಿಸಿ ನಿಧಾನಗತಿಯಲ್ಲಿ ಚಿತ್ರೀಕರಣ ನಡೆಸಿಕೊಂಡು ಬಂದ 'ನೀ ಟಾಟಾ ನಾ ಬಿರ್ಲಾ' ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿ ನಗಿಸಿದ ರವಿಚಂದ್ರನ್ ಹಾಗೂ ಜಗ್ಗೇಶ್ ಜೋಡಿ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.
ಚಿತ್ರ ಸಂಪೂರ್ಣವಾಗಿ ಹಾಸ್ಯಮಯವಾಗಿ ಸಾಗುತ್ತದೆ. ಗ್ಲ್ಯಾಮರ್ ಪ್ರಿಯರಿಗೆ ಖುಷಿಯಾಗುವಂತೆ ಬಿಂದಾಸ್ ಹುಡುಗಿ ಜೆನ್ನಿಫರ್ ಹಾಗೂ ಪೂಜಾ ಗಾಂಧಿ ನಟಿದ್ದಾರೆ. ಚಿತ್ರ 'ಬಲು ಅಪರೂಪ ನಮ್ ಜೋಡಿ' ಎಂಬ ಟ್ಯಾಗ್ಲೈನ್ ಹೊಂದಿದೆ.
ಚಿತ್ರವನ್ನು ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಮಾಡುವುದಕ್ಕಾಗಿ ಹಂತ ಹಂತವಾಗಿ ಚಿತ್ರೀಕರಣ ಮುಗಿಸಿದೆ. ಇಬ್ಬರು ದೊಡ್ಡ ನಟರಾಗಿದ್ದರಿಂದ ಅವರಿಬ್ಬರ ಸಮಯ ಹೊಂದಾಣಿಕೆ ಮಾಡಿ ಚಿತ್ರೀಕರಣ ಮಾಡುವುದು ಸುಲಭವಲ್ಲ ಎನ್ನುತ್ತಾರೆ ನಿರ್ದೇಶಕ ನಾಗೇಂದ್ರ ಮಾಗಡಿ.
ಮದರ್ ಇಂಡಿಯಾ ಮೂವೀಸ್ ಬ್ಯಾನರ್ನಡಿಯಲ್ಲಿ ಈ ಚಿತ್ರ ಬರುತ್ತಿದ್ದು, ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಹಾಗೂ ವಿ. ಮನೋಹರ್ ಅವರ ಸಾಹಿತ್ಯವನ್ನು ಚಿತ್ರ ಒಳಗೊಂಡಿದೆ.
ತೆರೆಯ ಮೇಲೆ ಈ ಜೋಡಿ ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ನೋಡಲು ಶುಕ್ರವಾರದವರೆಗೆ ಕಾಯಬೇಕು.