ಇದು ನಟಿ ಅಮೂಲ್ಯ ಅಭಿಮಾನಿಗಳಿಗೆ ಸಂತಸದ ಸುದ್ದಿ. ಈ ವಾರ ಬಿಡುಗಡೆಯಾಗಲಿರುವ ಎಸ್. ನಾರಾಯಣ್ ನಿರ್ದೇಶನದ ಚೈತ್ರದ ಚಂದ್ರಮ ಚಿತ್ರವು ಗಾಂಧಿನಗರದಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಅವರ ಮಗ ಪಂಕಜ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ಪಟ್ಟ ಅಲಂಕರಿಸಿದ್ದಾರೆ.
ಅಮೂಲ್ಯ ನಾಯಕಿಯಾಗಿ ನಟಿಸಿದ ಚೆಲುವಿನ ಚಿತ್ತಾರ ಚಿತ್ರ ಶತದಿನ ಪೂರೈಸಿದ್ದಲ್ಲದೇ ನಟಿ ಅಮೂಲ್ಯ ಅನೇಕ ಚಿತ್ರರಸಿಕರ ಮನಗೆದ್ದಿದ್ದಳು. ಚೆಲುವಿನ ಚಿತ್ತಾರ ಚಿತ್ರ ಹಿಟ್ ಆಗುತ್ತಿದ್ದಂತೆ ಅನೇಕ ನಿರ್ಮಾಪಕರು ಈಕೆಯ ಕಾಲ್ಶೀಟ್ಗೆ ಮುಗಿಬಿದ್ದಿದ್ದರು. ಆದರೆ ಈಕೆ ಕಲಿಕೆ ಮುಖ್ಯ ಎಂದು ಬಂದ ಅವಕಾಶಗಳನ್ನು ನಿರಾಕರಿಸಿದ್ದಳು. ಈಗ ರಜೆಯಲ್ಲಿ ಮತ್ತೆ ನಾರಾಯಣ್ ಅವರ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರ ಇಂದಿನ ಯುವಕರ ನಡುವೆ ನಡೆಯುವ ಪ್ರೇಮಕಥೆಯನ್ನು ವಿಭಿನ್ನವಾಗಿ ತೋರಿಸಿದ್ದಲ್ಲದೆ ತಿಳಿ ಹಾಸ್ಯ ಹಾಗೂ ಮನಸ್ಸಿಗೆ ಕಚಗುಳಿ ಇಡುವಂತಹ ದೃಶ್ಯಗಳನ್ನು ಚಿತ್ರ ಒಳಗೊಂಡಿದೆಯಂತೆ. ಕಾಶ್ಮೀರ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಣ ನಡೆದಿದೆ.
ಎಸ್. ನಾರಾಯಣ್ ಯಾವುದೇ ಕೆಲಸವನ್ನು ಪಕ್ಕಾ ಮಾಡಿರುತ್ತಾರೆ. ಜೊತೆಗೆ ಅಮೂಲ್ಯ ನಟನೆಯಿಂದಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ನಿರೀಕ್ಷೆ ಮೂಡಿಸಿದೆ. ಆ ನಿಟ್ಟಿನಲ್ಲಿ ಚೈತ್ರದ ಸಂಭ್ರಮ ಏನಾಗುತ್ತದೋ ಕಾದು ನೋಡಬೇಕು.