ಕನ್ನಡ ಚಿತ್ರರಂಗದಲ್ಲಿ ಮತ್ತೆ ಪ್ರತಿ ವಾರ ಒಂದಷ್ಟು ಚಿತ್ರಗಳು ಬಿಡುಗಡೆಯಾಗುವ ಸಮಯ ಬಂದಿದೆ. ಕಳೆದ ವಾರ ಒಂದೇ ಚಿತ್ರ ಬಿಡುಗಡೆಯಾದರೆ ಈ ವಾರ ಬರೋಬ್ಬರಿ ಐದು ಚಿತ್ರಗಳು ಬಿಡುಗಡೆಯಾಗುತ್ತಿದೆ. ಪೂಜಾಗಾಂಧಿ ಅಭಿನಯದ ಅನು, ಸಂತೋಷ್ ಅಭಿನಯದ ಕೆಂಪ, ಜಗ್ಗೇಶ್ ಹಾಗೂ ಎಸ್.ನಾರಾಯಣ್ ಅಭಿನಯದ ಚಿಕ್ಕಪೇಟೆ ಸಾಚಾಗಳು, ಪ್ರಭಾಕರ್ ನಿರ್ದೇಶಿಸಿ ನಟಿಸಿದ ಟ್ಯಾಕ್ಸಿ ನಂ-1 ಹಾಗೂ ಆಶಿತಾ ಅಭಿನಯದ ಮೈ ಗ್ರೀಟಿಂಗ್ಸ್ ಈ ವಾರ ತೆರೆ ಕಾಣಲಿರುವ ಚಿತ್ರ.
ತೆಲುಗಿನ ಹಿಟ್ ಚಿತ್ರ 'ಅನಸೂಯ'ವನ್ನು ನಿರ್ಮಾಪಕ ಬಾಲು ಕನ್ನಡದಲ್ಲಿ 'ಅನು' ಶೀರ್ಷಿಕೆಯಡಿ ತಯಾರಿಸಿದ್ದಾರೆ. ಚಿತ್ರದಲ್ಲಿ ಪೂಜಾಗಾಂಧಿ ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಕೊಲೆಯ ಸುತ್ತ ನಡೆಯುವ ಕಥೆಯನ್ನು ಚಿತ್ರ ಆಧರಿಸಿದೆ. ಚಿತ್ರದಲ್ಲಿ ಪೂಜಾ ಗಾಂಧಿ ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮೊದಲ ಬಾರಿಗೆ ಅವರು ಫೈಟ್ ಮಾಡಿದ್ದಾರೆ. ನನ್ನ ಪಾಲಿಗೆ ಇದೊಂದು ವಿಶಿಷ್ಟ ಚಿತ್ರ. ಈ ವರೆಗೆ ಇಂತಹ ಚಿತ್ರದಲ್ಲಿ ನಾನು ನಟಿಸಿಲ್ಲ. ಚಿತ್ರದ ಬಗ್ಗೆ ತುಂಬಾ ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಪೂಜಾಗಾಂಧಿ.
ದುನಿಯಾ ರಶ್ಮಿ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಪಾತ್ರ ಮಾಡಿದ್ದಾರೆ. ಇಲ್ಲಿ ವೈದಯಕೀಯ ವಿದ್ಯಾರ್ಥಿಯೊಬ್ಬಳ ಕೊಲೆಯ ಸುತ್ತದ ರಹಸ್ಯವನ್ನು ಬಿಡಿಸುವ ಕ್ರೈಂ ವರದಿಗಾರ್ತಿಯಾಗಿ ಪೂಜಾಗಾಂಧಿ ನಟಿಸಿದ್ದಾರೆ. ಚಿತ್ರವನ್ನು ಶಿವಗಣಪತಿ ನಿರ್ದೇಶಿಸಿದ್ದಾರೆ.