ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದರೂ, ಅದೆಂದಿಗೂ ಸಿನಿಮಾದಲ್ಲಿ ಪ್ರಾತಿನಿಧ್ಯ ಪಡೆದದ್ದು ಕಡಿಮೆ. ಈ ಕೊರತೆ ನೀಗಿಸಲು ಹೊರಟಿದ್ದಾರೆ ನಿರ್ದೇಶಕ ನರೇಂದ್ರ ಬಾಬು. ಕಬಡ್ಡಿ ಸುತ್ತವೇ ತಿರುಗುವ ಈ ಚಿತ್ರದ ಹೆಸರೂ "ಕಬಡ್ಡಿ" ಮತ್ತು ಚಿತ್ರದ ತಾರಾಗಣವೂ ಕಬಡ್ಡಿ ಕ್ರೀಡಾಳುಗಳಿಂದಲೇ ತುಂಬಿರುತ್ತದೆ.
ನಾಯಕ ಮತ್ತು ನಾಯಕಿಯರೂ ಸೇರಿದಂತೆ ಹೆಚ್ಚಿನ ನಟರು ತಮ್ಮ ಜೀವನದ ಒಂದಲ್ಲ ಒಂದು ಹಂತದಲ್ಲಿ ಕಬಡ್ಡಿಯನ್ನು ಅಪ್ಪಿಕೊಂಡವರೇ ಆಗಿರುವುದು ಈ ಚಿತ್ರದ ವಿಶೇಷ ಎನ್ನುತ್ತಾರೆ ನರೇಂದ್ರಬಾಬು.
ನಾಯಕನ ಪಾತ್ರದಲ್ಲಿರುವ ಪ್ರವೀಣ್, ರಾಷ್ಟ್ರ ಮಟ್ಟದ ತಂಡವನ್ನು ಪ್ರತಿನಿಧಿಸಿದ್ದರೆ, ನಾಯಕಿ ಪ್ರಿಯಾಂಕ ನಾಯ್ಡು ಅವರು ಕರ್ನಾಟಕ ರಾಜ್ಯ ತಂಡವನ್ನು ಕಬಡ್ಡಿಯಲ್ಲಿ ಪ್ರತಿನಿಧಿಸಿದ್ದರು.
"ರಾಷ್ಟ್ರೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಸುಮಾರು 40 ಮಂದಿಯನ್ನು ವಿಭಿನ್ನ ಪಾತ್ರಗಳಿಗಾಗಿ ಆರಿಸಲಾಗಿದೆ. ತೆರೆಯ ಮೇಲೆ ಕಬಡ್ಡಿ ಕಾಣಿಸಿಕೊಂಡಿದ್ದ ಚಿತ್ರಗಳಲ್ಲಿ ಹೆಚ್ಚಿನವರು ಈ ಹಿಂದೆಯೂ ಕಾಣಿಸಿಕೊಂಡಿದ್ದರು. ನಾನೇ ಬರೆದ ಚಿತ್ರಕಥೆಯ ಭಾಗಗಳಾಗಿರುತ್ತಾರೆ ಅವರು. ಈ ಆಟದ ಚಿತ್ರೀಕರಣಕ್ಕಾಗಿ ನಾವು ಸುಮಾರು 20 ಲಕ್ಷ ರೂ.ನಷ್ಟು ಹಣ ವ್ಯಯಿಸಿದ್ದೇವೆ" ಎಂದಿದ್ದಾರೆ ನರೇಂದ್ರಬಾಬು.
1.8 ಕೋಟಿ ರೂ. ಬಜೆಟಿನ ಈ ಚಿತ್ರದ ಚಿತ್ರೀಕರಣಕ್ಕೆ 18 ತಿಂಗಳು ಬೇಕಾಗಿತ್ತು. ಇದು ಎಷ್ಟು ಚೆನ್ನಾಗಿ ಮೂಡಿಬಂದಿದೆಯೆಂದರೆ, ಸಾಂಪ್ರದಾಯಿಕ ಚಿತ್ರ ನಿರ್ಮಾಪಕರು ಮತ್ತು ವಿತರಕರು ಕೂಡ ಚಿತ್ರದ ವಿತರಣಾ ಹಕ್ಕುಗಳ ಖರೀದಿಗಾಗಿ ವಿಚಾರಿಸತೊಡಗಿದ್ದಾರೆ ಎಂದಿದ್ದಾರೆ ಅವರು.
ಖ್ಯಾತ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಚಿತ್ರದಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ಚಿತ್ರದಲ್ಲಿ ಹೂಡಿಕೆ ಮಾಡಿದ ಪ್ರತಿಯೊಬ್ಬ ಹೂಡಿಕೆದಾರರಿಗೂ 5 ಲಕ್ಷ ರೂ. ಹೆಚ್ಚೇ ಕೊಡಲು ಮುಂದೆ ಬಂದಿದ್ದಾರೆ ಎಂದ ನರೇಂದ್ರ ಬಾಬು, ನಟ ಅವಿನಾಶ್ ಕೂಡ ಇದರಿಂದ ತೀವ್ರ ಪ್ರಭಾವಗೊಂಡಿದ್ದು, ತಮ್ಮ ಶುಲ್ಕವನ್ನೂ ಅವರು ತೆಗೆದುಕೊಳ್ಳಲಿಲ್ಲ ಎಂದು ಹರ್ಷದಿಂದಲೇ ನುಡಿದರು.
ನಿರ್ದೇಶಕರು ಅಚ್ಚುಕಟ್ಟಾಗಿ ಚಿತ್ರವನ್ನು ರೂಪಿಸಿರುವುದು ಅತ್ಯಂತ ಸಂತಸದಾಯಕ ಸಂಗತಿ. ಕಬಡ್ಡಿ ನನ್ನ ನೆಚ್ಚಿನ ಆಟವೂ ಹೌದು. ಒಬ್ಬ ಕಲಾವಿದನಾಗಿ ಇಂತಹ ಸವಾಲಿನ ಪ್ರಯತ್ನಗಳನ್ನು ಬೆಂಬಲಿಸುವುದು ನನ್ನ ಹೊಣೆಗಾರಿಕೆ ಎಂದಿದ್ದಾರೆ ಅವಿನಾಶ್.
ರಾಜ್ಯದ ವಿವಿಧೆಡೆ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಗಳು ನಡೆಯುತ್ತಿದ್ದರೂ, ಕೆಲವೇ ಕೆಲವು ಕನ್ನಡ ಚಿತ್ರಗಳು ಮಾತ್ರ ಈ ಆಟಕ್ಕೆ ಮಣೆಹಾಕಿದ್ದವು ಎಂದಿದ್ದಾರೆ ಕಬಡ್ಡಿ ಆಟಗಾರರೇ ಆಗಿರುವ ನಿರ್ಮಾಪಕ ರವಿ. ಈ ಚಿತ್ರವು ಸಂಪೂರ್ಣವಾಗಿ ಕಬಡ್ಡಿ-ಕೇಂದ್ರಿತವಾಗಿದ್ದು, ಆಟದ ಎಲ್ಲ ರೋಚಕ ಕ್ಷಣಗಳನ್ನು ಚಿತ್ರದಲ್ಲಿ ತುಂಬಿಸಲಾಗಿದೆ ಎಂದಿದ್ದಾರವರು.