ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ ಚಾತುರ್ಯದಿಂದ ಹೊಸ ಹವಾ ಸೃಷ್ಟಿಸಿದ್ದ ಮಾಲಾಶ್ರೀ ಅವರ ಬಹು ನೀರೀಕ್ಷೆಯ ಕಿರಣ್ ಬೇಡಿ ಚಿತ್ರ ಈ ವಾರ ತೆರೆ ಕಾಣಲಿದೆ.
ಕೋಟಿ ನಿರ್ಮಾಪಕರೆಂದೇ ಖ್ಯಾತರಾದ ರಾಮು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಮಾಸ್ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈ. ಈ ಚಿತ್ರದಲ್ಲಿ ಮತ್ತೊಮ್ಮೆ ಮಾಲಾಶ್ರೀಯ ಆರ್ಭಟವನ್ನು ಕಾಣಬಹುದು. ದುರ್ಗಿ ಚಿತ್ರದಲ್ಲಿನ ಆಕ್ಷನ್‌ಗೂ ಈ ಚಿತ್ರದಲ್ಲಿನ ಆಕ್ಷನ್‌ಗೂ ತುಂಬಾ ವ್ಯತ್ಯಾಸವಿದೆಯಂತೆ. ಚಿತ್ರದ ಒಂದೊಂದು ಫೈಟ್ಗೂ 40 ರಿಂದ 60 ಲಕ್ಷ ಖರ್ಚು ಮಾಡಿದ್ದಾರೆ. ಫೈಟ್ ಸೀನ್ ಶೂಟಿಂಗ್ ಸಮಯದಲ್ಲಿ ಸರಿಗಮ ವಿಜಿ ಗಾಯಗೊಂಡಿದ್ದರು.
ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದಾರೆ. ಇದರೊಂದಿಗೆ ಚಿತ್ರದಲ್ಲಿ ಮಧುರವಾದ ಸಂಗೀತಕ್ಕೇನೂ ಬರವಿಲ್ಲ ಎನ್ನಲಾಗುತ್ತಿದೆ. ಚಿತ್ರಕ್ಕಾಗಿ ಮಾಲಾಶ್ರೀ 15 ರಿಂದ 16 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ. ಆದರೆ ಆ ಕಿರಣ್ ಬೇಡಿಗೂ ಈ ಕಿರಣ್ ಬೇಡಿಗೂ ತುಂಬಾ ವ್ಯತ್ಯಾಸವಿದೆ. ಚಿತ್ರ ಮಾಡುವುದಕ್ಕೂ ಮುನ್ನ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನ ಕಥೆ ಆಧರಿಸಿ ಚಿತ್ರ ಮಾಡಬೇಕೆಂದುಕೊಂಡಿದ್ದೆವು. ಆಮೇಲೆ ಆ ಕಥೆಯನ್ನು ಕೈ ಬಿಟ್ಟು ಸಿನಿಮಾ ಟಚ್ ಇರುವ ಕಥೆ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಚಿತ್ರದ ಹೆಸರಿನಲ್ಲಿ ಕಿರಣ್ ಬೇಡಿ ಅವರಿಗೆ ಧಕ್ಕೆ ಬರಬಾರದೆಂದು ಈ ನಿರ್ಧಾರಕ್ಕೆ ಬಂದೆವು ಎನ್ನುತ್ತಾರೆ ಮಾಲಾಶ್ರೀ.
ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಮಹಿಳೆಯರು ಕೂಡಾ ಈ ಚಿತ್ರ ನೋಡಬೇಕು ಎನ್ನುತ್ತಾರೆ ಮಾಲಾಶ್ರೀ. ಕಿರಣ್ ಬೇಡಿಯ ಮೋಡಿ ಮಾಡುತ್ತಾಳೋ ಕಾದು ನೋಡಬೇಕು.