ಕಲಾವಿದೆ ಲೀಲಾವತಿ ಎರಡು ವಿಧಗಳಲ್ಲಿ ಪ್ರೇಕ್ಷಕರ ಪ್ರೀತಿ ಹಾಗೂ ಅನುಕಂಪವನ್ನು ಗಳಿಸಿದ್ದಾರೆ, ಗಳಿಸುತ್ತಲೇ ಇದ್ದಾರೆ. ಅವರ ಅಭಿನಯ ಸಾಮರ್ಥ್ಯಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿದ್ದರೆ, ತಮ್ಮ ಮಗನಿಗೆ ಉದ್ಯಮದಲ್ಲೊಂದು ಸ್ಥಾನ ಕಲ್ಪಿಸಲು ಅವರು ಪಡುತ್ತಿರುವ ಕಷ್ಟಕ್ಕೂ ಅನುಕಂಪ ದಕ್ಕುತ್ತಿದೆ ಎನ್ನುತ್ತಿದೆ ಚಿತ್ರೋದ್ಯಮ.
ಅದೇನೇ ಇರಲಿ, ಸದ್ಯದಲ್ಲಿ ತಾಯಿ-ಮಗನ ಅಭಿನಯದ 'ಯಾರದು?' ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರ ಸಾಮಗ್ರಿಗಳನ್ನು ನೋಡಿದಾಗ ಅದರಲ್ಲಿ ಹೆಚ್ಚಿನ ವಿವರಗಳಿಲ್ಲ. ಆದರೆ ನಿಸ್ಸಂಶಯವಾಗಿಯೂ ಇದೊಂದು ಸಸ್ಪೆನ್ಸ್ ಚಿತ್ರ ಎಂಬುದು ಉದ್ಯಮದಲ್ಲಿ ಕೇಳಿಬರುತ್ತಿರುವ ಮಾತು.
ಚಿತ್ರದ ಕುರಿತು ಅತೀವ ಭರವಸೆಯನ್ನು ಹೊಂದಿರುವ ಲೀಲಮ್ಮ, ಚಿತ್ರದ ವಿತರಣೆಯನ್ನು ಯಾರಿಗೂ ಬಿಟ್ಟುಕೊಡದೆ ತಾವೇ ತಮ್ಮ ಲೀಲಾವತಿ ಕಂಬೈನ್ಸ್ ಮೂಲಕ ಬಿಡುಗಡೆ ಮಾಡುತ್ತಿರುವುದರ ಆತ್ಮವಿಶ್ವಾಸದ ದ್ಯೋತಕ ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ. ಅದರಲ್ಲೂ ಕಪಾಲಿ ಚಿತ್ರಮಂದಿರವೇ ಮುಖ್ಯ ಚಿತ್ರಮಂದಿರವಾಗಿ ಸಿಕ್ಕಿರುವುದಕ್ಕೆ ಎಲ್ಲರ ಹುಬ್ಬೇರಿದೆ ಎನ್ನುತ್ತಿದೆ ಉದ್ಯಮ.
ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಲವ್-ಸಸ್ಪೆನ್ಸ್ ಅಂಶಗಳು ಹಿತಮಿತವಾಗಿ ಮಿಶ್ರಣಗೊಂಡಿವೆಯಂತೆ. ಜೊತೆಗೆ ಅಭಿಮಾನಿಗಳಿಗೋಸ್ಕರ ವಿನೋದ್ರಾಜ್ ಹೊಸದೇನನ್ನೋ ಕೊಡಲಿದ್ದಾರೆ; ಅದು ಚಿತ್ರದಲ್ಲಷ್ಟೇ ಬಹಿರಂಗಗೊಳ್ಳುತ್ತದೆ ಎಂಬ ಸುದ್ದಿಗಳು ಹಬ್ಬಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅವರ ಅಭಿನಯದ ಕನ್ನಡದ ಕಂದ ಚಿತ್ರದ ಸಂದರ್ಭದಲ್ಲಿಯೂ ಇದೇ ಹೈಪ್ ಸೃಷ್ಟಿಯಾಗಿತ್ತು. ಅದೀಗ ಪುನರಾವರ್ತನೆಗೊಳ್ಳುವುದೇ?