ಈ ಮಾಯಾನಗರಿಯೇ ಹಾಗೆ. ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರವೇ ತನ್ನ ಒಡಲಿನಲ್ಲಿ ಉಳಿಸಿಕೊಳ್ಳುತ್ತದೆ. ಅಥವಾ ಕೆಲವರು ಮಾತ್ರವೇ ಇಲ್ಲಿನ ಜಾಯಮಾನಕ್ಕೆ ಒಗ್ಗಿಕೊಳ್ಳುತ್ತಾರೆ! ಮುಂಚೆಯೆಲ್ಲಾ ವೃತ್ತಿಪರ ಚಿತ್ರನಿರ್ಮಾಪಕರು ಮಾತ್ರವೇ ಚಿತ್ರಗಳನ್ನು ನಿರ್ಮಿಸಬೇಕು ಎಂಬುದೊಂದು ಅಲಿಖಿತ ಸಂಪ್ರದಾಯವಿತ್ತು. ಆದರೆ, ಅದೀಗ ಮುರಿಯಲ್ಪಟ್ಟು ಯಾರು ಬೇಕಾದರೂ ಇಲ್ಲಿಗೆ ಧುಮುಕಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ.
ಪರಿಚಯ ಎಂಬ ಚಿತ್ರದ ಮೂಲಕ ಸ್ಯಾಂಡಲ್‌ವುಡ್ಡಿಗೆ ಕಾಲಿಡುತ್ತಿರುವ ಕೃಷ್ಣಮೂರ್ತಿಯವರ ಪರಿಚಯ ಮಾಡಿಕೊಡುವುದಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು ನೋಡಿ. ಹಾಡುಗಳನ್ನು ಕೇಳಿಕೊಂಡು ಸಾಫ್ಟ್‌ವೇರ್ ಉದ್ಯೋಗದಲ್ಲಿ ನೆಮ್ಮದಿಯಾಗಿದ್ದ ಕೃಷ್ಣಮೂರ್ತಿಯವರಿಗೆ ಸಂಜಯ್ ಅವರ ಪರಿಚಯವಾಗಿದ್ದೇ ತಡ, ಸಿನಿಮಾ ಜಗತ್ತಿನ ಆಕರ್ಷಣೆ ಉಂಟಾಯಿತು. ಈ ಸಂಜಯ್ ಬೇರಾರೂ ಅಲ್ಲ, ಗಣೇಶ್ ಅಭಿನಯದ ಹುಡುಗಾಟ ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿದವರು. ಅಕಸ್ಮಾತ್ತಾಗಿ ಆದ ಪರಿಚಯ ಗೆಳೆತನವಾಗಿ, ಕಥೆಯನ್ನು ಪರಸ್ಪರ ಚರ್ಚಿಸುವ ಹಂತಕ್ಕೆ ಬಂದು, ಕಥೆ ವಿಭಿನ್ನವಾಗಿದೆಯಲ್ಲಾ? ನಾನೇ ಏಕೆ ಈ ಚಿತ್ರವನ್ನು ನಿರ್ಮಿಸಬಾರದು? ಎಂಬ ಆಲೋಚನೆ ಕೃಷ್ಣಮೂರ್ತಿಯವರ ತಲೆಗೆ ಹೊಕ್ಕುವಲ್ಲಿಗೆ ಬಂದು ನಿಂತಿತು. ಮೂಲತಃ ಸಾಫ್ಟ್‌ವೇರ್ ವಲಯದಲ್ಲಿ ಉದ್ಯಮಿಯಾಗಿರುವ ಅವರು ರಂಗಕ್ಕೆ ಧುಮುಕೇಬಿಟ್ಟರು.
ಎಲ್ಲೂ, ಯಾವ ನ್ಯೂನತೆಗಳೂ ತಲೆದೋರದಂತೆ ಚಿತ್ರಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ಒದಗಿಸಿಕೊಟ್ಟು, ಉತ್ತಮವಾದ ಚಿತ್ರವನ್ನು ಪ್ರೇಕ್ಷಕರ ಮುಂದಿಡುವುದು ಅವರ ಇರಾದೆಯಂತೆ. ಚಿತ್ರದ ಹಾಡುಗಳಂತೂ ಈಗಾಗಲೇ ಸೂಪರ್ ಹಿಟ್ ಆಗಿರುವುದು ಅವರ ಉತ್ಸಾಹವನ್ನು ಇನ್ನೂ ಇಮ್ಮಡಿಗೊಳಿಸಿದೆ. ಯಾವುದಕ್ಕೂ ರೇಖಾ, ತರುಣ್ ಅಭಿನಯದ ಪರಿಚಯ ಪ್ರೇಕ್ಷರಿಗೂ ಪರಿಚಯವಾಗುವವರೆಗೂ ಕಾಯಬೇಕು.