ಡಿಸೆಂಬರ್ ತಿಂಗಳೆಂದರೆ ನಟ ಗಣೇಶ್ ಅವರಿಗೆ ಬಲು ಪ್ರೀತಿ. ಯಾಕೆಂದರೆ ಅವರ ಮುಂಗಾರು ಮಳೆ ಎಂಬ ಹಿಟ್ ಚಿತ್ರ ಇದೇ ಮಾಸದಲ್ಲಿ ಬಿಡುಗಡೆಯಾಗಿತ್ತು. ಈಗ ಅವರದೇ ನಿರ್ಮಾಣದ ಮಳೆಯಲಿ ಜೊತೆಯಲಿ ಎಂಬ ಮತ್ತೊಂದು ಮಳೆ ಚಿತ್ರ ಕೂಡ ಇದೇ ಡಿಸೆಂಬರ್ ಅಂದರೆ ಇಂದೇ ಬಿಡುಗಡೆಯಾಗಿದೆ. ಇದೊಂದು ಭಾವನಾತ್ಮಕ ನಂಟೆಂದು ಗಣೇಶ್ ಹೇಳಿಕೊಳ್ಳುತ್ತಾರೆ.
ಒಂದು ವರ್ಷದಿಂದ ಗಣೇಶ್ ನಟಿಸಿದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಮಳೆಯಲಿ ಜೊತೆಯಲಿ ಚಿತ್ರ ಅವರ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ ಎನ್ನುತ್ತಾರೆ ಗಣೇಶ್ ಆತ್ಮ ವಿಶ್ವಾಸದಿಂದ. ಸಂಪೂರ್ಣ ಮನರಂಜನಾಮಯ ಚಿತ್ರ ಮಾಡಿದ ಖುಷಿ ಗಣೇಶ್ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಚಿತ್ರದಲ್ಲಿ ಅವರು ಹುಡುಗಿಯರೊಂದಿಗೆ ಸುತ್ತಾಡುವುದೂ ಇದೆಯಂತೆ. ಸಿಕ್ಕಾಪಟ್ಟೆ ಡೈಲಾಗುಗಳ ಮೇಲೆ ಡೈಲಾಗುಗಳೂ ಇವೆಯಂತೆ. ಅಂದ ಮೇಲೆ ಕಾಲೇಜು ಹೈಕಳಿಗೆ ಮನರಂಜನೆಯ ರಸದೌತಣ ಸಿಗೊದಂತೂ ಖಂಡಿತ.
ಇನ್ನು ಮುಂದೆ ಅವರದ್ದೇ ಸ್ವಂತ ಬ್ಯಾನರಿನಲ್ಲಿ ವರ್ಷಕ್ಕೊಂದು ಸಿನಿಮಾ ಮಾಡಿ ಅದನ್ನು ಸ್ಯಾಂಡಲ್ವುಡ್ಡಿಗೆ ಕಾಣಿಕೆಯಾಗಿ ಕೊಡಲು ತೀರ್ಮಾನಿಸಿದ್ದಾರಂತೆ ಗಣೇಶ್. ಪ್ರೀತಂಗುಬ್ಬಿ ಮಾತನಾಡಲು ಬಾಯಿ ಬಿಟ್ಟರೆ, ನಿರ್ದೇಶನ ಮಾಡುವಾಗಿನ ಸಕಲೇಶಪುರದ ಮಳೆಯ ವಾತಾವರಣವನ್ನಷ್ಟೇ ಬಣ್ಣಿಸುತ್ತಾರೆ. ಹಾಗಾಗಿ ಅವರಿನ್ನೂ ಮಳೆಯಲ್ಲೇ ನೆನೆಯುತ್ತಿರುವಂತಿದೆ.
ಚಿತ್ರದ ಆರೂ ಹಾಡುಗಳು ಆಲಿಸಲು ಸೊಗಸಾಗಿದೆ ಎನ್ನುತ್ತಾರೆ ಗಣೇಶ್. ಈಗಾಗಲೇ ಹಾಡುಗಳಿಗೆ ಕೇಳುಗರ ಉತ್ತಮ ಅಭಿಪ್ರಾಯವೂ ಮೂಡಿಬಂದಿದೆ. ಮಳೆಯಲಿ ಜೊತೆಯಲಿ ಚಿತ್ರವಂತೂ, ಹೇಳಿ ಕೇಳಿ ಗಣೇಶ್ ಸ್ವಂತ ದುಡ್ಡಿನಿಂದಲೇ ಅವರೇ ನಾಯಕನಾಗಿ ನಟಿಸುತ್ತಿರುವ ಚಿತ್ರ. ಗೆದ್ದರೆ ಕೋಟಿ. ಸೋತರೆ ಕಷ್ಟ. ಇನ್ನು ಈ ಚಿತ್ರದ ಭವಿಷ್ಯ ನೋಡುಗರ ಮೇಲಿದೆ.