ಬಹುನಿರೀಕ್ಷೆಯ ಎರಡು ಚಿತ್ರಗಳು ಈ ವಾರ ತೆರೆಗೆ ಬರುತ್ತಿರುವುದು ವಿಶೇಷ. ಪುನೀತ್ ಪ್ರಿಯಾಮಣಿ ಅಭಿನಯದ 'ರಾಮ್' ಚಿತ್ರ ಒಂದಾದರೆ, 'ಆ ದಿನಗಳು' ಖ್ಯಾತಿಯ ಅಗ್ನಿ ಶ್ರೀಧರ್ ಸಂಭಾಷಣೆಯಿರುವ ರಾಜಕೀಯ ಕಥಾಹಂದರವಿರುವ ಸುಮನಾ ಕಿತ್ತೂರು ನಿರ್ದೇಶನದ 'ಕಳ್ಳರ ಸಂತೆ' ಕೂಡಾ ತೆರೆಗೆ ಬರುತ್ತಿದೆ. ಪ್ರಚಾರದ ವಿಷಯದಲ್ಲಿ ಎರಡೂ ಭಾರೀ ಸುದ್ದಿಯಾದವುಗಳು.
'ರಾಜ್- ದಿ ಶೋ ಮ್ಯಾನ್' ನಂತರ ತೆರೆಗೆ ಬರುತ್ತಿರುವ ಪುನೀತ್ ಚಿತ್ರ 'ರಾಮ್'. ಪ್ರಸಿದ್ಧ ನಟಿ ಪ್ರಿಯಾಮಣಿ ಅವರ ಮೊದಲ ಕನ್ನಡ ಚಿತ್ರವಿದು. ಈಗಾಗಲೇ ರಾಜ್ಯಾದ್ಯಂತ ವರ್ಣರಂಜಿತ ಪೋಸ್ಟರುಗಳು ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿವೆ. ಕೆ.ಮಾದೇಶ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುನೀತ್ ವಿಶೇಷ ಕಾಸ್ಟ್ಯೂಮ್‌ಗಳಲ್ಲಿ ಮಿಂಚಿದ್ದಾರೆ ಎಂಬ ಸುದ್ದಿಯೂ ಕೂಡಾ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. ಹೇಳಿ ಕೇಳಿ, ಭಾರೀ ಅಭಿಮಾನಿ ಬಳಗ ಹೊಂದಿರುವ ಪುನೀತ್ ಜೊತೆಗೆ ಕಳ್ಳರ ಸಂತೆ ಸ್ಪರ್ಧೆಗಿಳಿದಿದೆ.
MOKSHA
ಸೆನ್ಸಾರ್ ಮಂಡಳಿಯ ವಿರುದ್ಧ ಸಿಟ್ಟಾದ 'ಕಳ್ಳರ ಸಂತೆ' ಚಿತ್ರ ತಂಡ ಮೊನ್ನೆ ಮೊನ್ನೆ ಸೆನ್ಸಾರ್ ಕಚೇರಿಯ ಎದುರು ಪ್ರತಿಭಟನೆಯನ್ನು ನಡೆಸಿ ಭಾರೀ ಸುದ್ದಿಮಾಡಿತ್ತು. ಕಳ್ಳರ ಸಂತೆ, ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ ಎಂದು ನಮೂದಿಸಿತ್ತು. ಜೊತೆಗೆ ಚಿತ್ರದಲ್ಲಿ ಧಾರಾಳವಾಗಿ ಬಳಸಿದ 'ಗಣಿಲೂಟಿ', 'ವಿಧಾನಸೌಧ', 'ಕಳ್‌ನನ್‌ಮಕ್ಳು' ಮತ್ತಿತರ ಹಲವು ಶಬ್ದಗಳಿಗೆ ಕತ್ತರಿ ಹಾಕಬೇಕೆಂದು ಸೆನ್ಸಾರ್ ಮಂಡಳಿ ಆದೇಶ ನೀಡುವ ಜೊತೆಗೆ ಸತ್ಯಕಥೆ ಎಂಬ ಅಡಿಬರಹವನ್ನು ಅಳಿಸಿ ಹಾಕಿ ಆ ಜಾಗದಲ್ಲಿ ಕಾಲ್ಪನಿಕ ಕಥೆ ಎಂಬುದಾಗಿ ಬರೆಯಬೇಕೆಂದು ಆದೇಶಿಸಿತು. ಇಷ್ಟೆಲ್ಲ ರಗಳೆ, ವಾದ-ವಿವಾದಗಳ ನಂತರ ಕೊನೆಗೂ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಈ ಚಿತ್ರದ ಮತ್ತೊಂದು ವಿಶೇಷವೆನೆಂದರೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ,ಸಂಭಾಷಣೆ ಬರೆದಿದ್ದಾರೆ. ಹಲವು ದಿನಗಳ ಬಳಿಕ ಅವರ ಸಂಭಾಷಣೆ ಆಲಿಸುವ ಭಾಗ್ಯ ಕನ್ನಡ ಪ್ರೇಕ್ಷಕರದ್ದು. ವಿ.ಮನೋಹರ್ ಸಂಗೀತ ನೀಡಿದ್ದಾರೆ. ಅಪರೂಪಕ್ಕೆ ಸಂಗೀತ ನೀಡಿದರೂ ಇಂಪಾಗಿ ನೀಡುವುದು ಮನೋಹರ್ ಅವರ ಕೌಶಲ್ಯ. ನಿರ್ಮಾಣದ ಉಸ್ತುವಾರಿಯನ್ನು ರವೀಂದ್ರ ಎಂಬುವವರು ಹೊತ್ತುಕೊಂಡಿದ್ದರು.
ತನ್ನ 'ಸ್ಲಂಬಾಲ' ಚಿತ್ರಕ್ಕೆ ಭಾರೀ ಪ್ರಚಾರ ಪಡೆದು ನಿರ್ದೇಶನದಲ್ಲಿ ಭರವಸೆ ಮೂಡಿಸಿದ ಪ್ರತಿಭೆ ಸುಮನಾ ಕಿತ್ತೂರು. ಸ್ಲಂಬಾಲ ಯಶಸ್ವಿಯಾಗದಿದ್ದರೂ, ವಿಮರ್ಶಕರಿಂದ ನಿರ್ದೇಶನ, ನಿರೂಪಣೆಯಲ್ಲಿ ಮೆಚ್ಚುಗೆ ಪಡೆದ ಸುಮನಾ ಕಿತ್ತೂರು ಈಗ ಈ ಕಳ್ಳರ ಸಂತೆ ಎಂಬ ವಿಭಿನ್ನ ಚಿತ್ರದ ಜೊತೆಗೆ ಬಂದಿದ್ದಾರೆ. ಯಶ್ ಹಾಗೂ ಹರಿಪ್ರಿಯಾ ಜೋಡಿ ಇಲ್ಲಿ ನಾಯಕ ನಾಯಕಿಯಾಗಿ ಮೇಳೈಸಿದ್ದಾರೆ. ಈಗಾಗಲೇ 'ಗೋಕುಲ' ಚಿತ್ರದಲ್ಲಿನ ಯಶ್ ನಟನೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಲ್ಲಿಯೂ ಅದೇ ರೀತಿ ಯಶ್ ಯಶಸ್ಸು ಮುಂದುವರಿಯುತ್ತದೋ ನೋಡಬೇಕು. ಇನ್ನು ನಾಯಕಿ ಹರಿಪ್ರಿಯಾ ಚಿತ್ರರಂಗದಲ್ಲಿ ಭರವಸೆಯ ಕನ್ನಡಿಗ ನಟಿ ಎಂದು ಗುರುತಿಸಿಕೊಂಡರೂ ಈಕೆ ನಟಿಸಿದ ಬೆರಳೆಣಿಕೆಯ ಚಿತ್ರಗಳೆಲ್ಲವೂ ಸೋತಿವೆ. ಹಾಗಾಗಿ ಹರಿಪ್ರಿಯಾ ಪಾಲಿಗೂ ಕಳ್ಳರ ಸಂತೆ ಅಗ್ನಿಪರೀಕ್ಷೆಯೇ ಸರಿ.