ಚಿತ್ರ : ಆಪ್ತ ರಕ್ಷಕ ತಾರಾಗಣ : ವಿಷ್ಣುವರ್ಧನ್, ಭಾವನಾ, ವಿಮಲಾ ರಾಮನ್, ಲಕ್ಷ್ಮಿ ಗೋಪಾಲಸ್ವಾಮಿ, ಕೋಮಲ್, ಶ್ರೀನಿವಾಸ್ ಮೂರ್ತಿ ನಿರ್ದೇಶನ: ಪಿ.ವಾಸು ನಿರ್ಮಾಪಕ : ಕೃಷ್ಣ ಪ್ರಜ್ವಲ್
ಆಪ್ತ ಮಿತ್ರ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಆಪ್ತರಕ್ಷಕ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಇದೇ ವಾರ ಈ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಪ್ರೇಕ್ಷಕ ಪ್ರಭುಗಳು ಸಹ ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಾ ಕುಳಿತ್ತಿದ್ದಾರೆನ್ನಲಾಗಿದೆ. ಈ ಹಿಂದೆ ಬಿಡುಗಡೆಯಾದ ವಿಷ್ಣು ಅಭಿನಯದ ಸ್ಕೂಲ್ ಮಾಸ್ಟರ್ ಚಿತ್ರಕ್ಕೂ ಹೀಗೆ ಹೇಳಲಾಗಿತ್ತು. ಆದರೆ ಆ ಚಿತ್ರ ಸೋತು ತನಗೆ ನಷ್ಟವಾಗಿದೆ ಎಂದು ಸ್ವತಃ ನಿರ್ಮಾಪಕರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
PR
ಅದಿರಲಿ, ಈಗ ಆಪ್ತರಕ್ಷಕದ ವಿಚಾರಕ್ಕೆ ಬಂದರೆ, ಇದು, ವಿಷ್ಣು ಅಭಿನಯದ 200ನೇ ಚಿತ್ರ ಹಾಗೂ ಕೊನೆಯ ಚಿತ್ರ. ಈ ಚಿತ್ರದಲ್ಲೂ ಅವರು ಎಂದಿನಂತೆ ಅದ್ಬುತವಾಗಿ ನಟಿಸಿದ್ದಾರೆ ಎನ್ನಲಾಗಿದೆ. ಆದರೆ ಅದನ್ನು ವೀಕ್ಷಿಸಲು ಸ್ವತಃ ಅವರಿಗೆ ಭಾಗ್ಯವಿಲ್ಲದಂತಾಗಿದೆ. ಚಿತ್ರದ ಪೋಸ್ಟರ್, ವೇಷ ಭೂಷಣ ಗಮನಿಸಿದರೆ ಥೇಟ್ ಅಪ್ತಮಿತ್ರ ಚಿತ್ರದ ಎಳೆಯನ್ನೇ ಹೊಲುವಂತಿದೆ.
ಮತ್ತೊಂದೆಡೆ ಅಪ್ತರಕ್ಷಕನಿಗೆ ವಿರುದ್ಧವಾಗಿ ಆಪ್ತ ಮಿತ್ರನಾದ ನಟ ರಮೇಶ್ ಎದ್ದು ನಿಂತಿದ್ದಾರೆ. ಕಾರಣ ರಮೇಶ್ ಅರವಿಂದ್ ಅವರ ಕ್ರೇಜಿ ಕುಟುಂಬ ಸಹ ಆಪ್ತರಕ್ಷಕ ಬಿಡುಗಡೆಯಾಗುವ ದಿನದಂದೇ ಬಿಡುಗಡೆಯಾಗುವ ಸೂಚನೆಗಳಿವೆ. ಆಪ್ತರಕ್ಷಕದಲ್ಲಿನ ಆಪ್ತಮಿತ್ರನ ಆಗಮನಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಚಿತ್ರಮಂದಿರಗಳನ್ನೆಲ್ಲ ಸಿಂಗರಿಸಲಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಾಗಿ ನೋಡುವುದೊಂದೇ ಬಾಕಿ.
ಈ ಚಿತ್ರಕ್ಕೂ ಸಹ ಗುರುಕಿರಣ್ ಸಂಗೀತ ನೀಡಿದ್ದಾರೆ. ಆಪ್ತಮಿತ್ರಕ್ಕೆ ಅವರು ನೀಡಿದ ಸಂಗೀತ ಇಗಲೂ ಜನರ ಮನದಲ್ಲಿ ಗುಂಯ್ಗುಡುತ್ತಿದೆ. ಸಾಹಿತ್ಯ ಕವಿರಾಜ್, ನಿರ್ದೇಶನದ ಜವಾಬ್ದಾರಿಯನ್ನು ಪಿ.ವಾಸು ಅವರು ಹೊತ್ತುಕೊಂಡಿದ್ದು, ಕೃಷ್ಣ ಪ್ರಜ್ವಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಪ್ತಮಿತ್ರನ ಬಿಡುಗಡೆಯಿಂದ ನಿರ್ಮಾಪಕ ದ್ವಾರಕೀಶ್ ಬಂಪರ್ ಗೆದ್ದಿದ್ದರು. ಆಪ್ತರಕ್ಷಕನ ಬಿಡುಗಡೆಯಿಂದ ಕೃಷ್ಣ ಪ್ರಜ್ವಲ್ ಅವರ ಕಥೆ ಏನಾಗುವುದೋ ಎಂಬುದನ್ನು ಚಿತ್ರ ನೋಡಿದ ಮೇಲೆಯೇ ತಿಳಿಯಲಿದೆ.