ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬಹುನಿರೀಕ್ಷೆಯ ನಾನು ನನ್ನ ಕನಸು ಈ ವಾರ ತೆರೆಗೆ (Nanu Nanna Kanasu | Tharangini | Preethiyinda Ramesh | Nannavanu)
ಸಿನಿಮಾ ಮುನ್ನೋಟ
Bookmark and Share Feedback Print
 
ಈ ವಾರ ಭರ್ಜರಿಯಾಗಿ ನಾಲ್ಕು ಚಿತ್ರಗಳು ತೆರೆ ಕಾಣುತ್ತಿವೆ. ಪ್ರಕಾಶ್ ರೈ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ನಾನು ನನ್ನ ಕನಸು ಚಿತ್ರ ಈ ವಾರ ತೆರೆಕಾಣುವ ಚಿತ್ರಗಳಲ್ಲಿ ಪ್ರಮುಖವಾದುದು. ಉಳಿದಂತೆ ಐಂದ್ರಿತಾ ರೇ ಪ್ರಜ್ವಲ್ ಜೋಡಿಯ ನನ್ನವನು, ರಮೇಶ್ ಅರವಿಂದ್ ಅವರ ಪ್ರೀತಿಯಿಂದ ರಮೇಶ್, ತರಂಗಿಣಿ ಚಿತ್ರಗಳೂ ಕೂಡಾ ಈ ವಾರ ತೆರೆ ಕಾಣುತ್ತಿವೆ.

MOKSHA
ನಾನು ನನ್ನ ಕನಸು: ನಾನು ನನ್ನ ಕನಸು ಚಿತ್ರ ಪ್ರಕಾಶ್ ರೈ ಅವರ ಕನಸಿನ ಕೂಸು. ಇದರಲ್ಲಿ ಕನಸು ಕೂಡಾ ಒಂದು ಕೂಸು. ಅರ್ಥಾತ್, ಇಲ್ಲಿ ಪ್ರಕಾಶ್ ರೈ ತಂದೆಯಾಗಿ ಅಭಿನಯಿಸಿದರೆ, ಮಗಳು ಕನಸು ಆಗಿ ಅಮೂಲ್ಯ ಅಭಿನಯಿಸುತ್ತಿದ್ದಾರೆ. ತಾಯಿಯಾಗಿ ಸಿತಾರಾ ಕಾಣಿಸಿಕೊಳ್ಳಲಿದ್ದಾರೆ.

ಪ್ರಕಾಶ್ ರೈ ಇದೇ ಚಿತ್ರವನ್ನು ಹಿಂದೆ ತಮಿಳಿನಲ್ಲಿ ನಿರ್ಮಿಸಿ ನಟಿಸಿದ್ದರು. ಅದೇ ಕಥೆಯನ್ನು ಇದೀಗ ಕನ್ನಡಕ್ಕೆ ತಂದಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣವಿದೆ. ಹಂಸಲೇಖಾ ಸಂಗೀತವಿದೆ. ತಮಿಳಿನಲ್ಲಿ ನಿರ್ಮಿಸಿದ ಕಥೆಯನ್ನು ಕನ್ನಡಕ್ಕೆ ಯಾಕೆ ತಂದಿರಿ ಎಂದರೆ ಪ್ರಕಾಶ್ ರೈ, ಇದು ನನ್ನ ಹಾಗೂ ಮಗಳ ಕಥೆ. ತಂದೆ ಮಗಳ ಈ ಕಥೆ ನನಗೆ ಅತ್ಯಂತ ಆಪ್ತವಾದ ಕಥೆ. ತಂದೆ ಮಗಳ ನವಿರು ಸಂಬಂಧ ಇಲ್ಲಿದೆ. ಅಲ್ಲದೆ ನಾನು ನಿರ್ದೇಶನಕ್ಕೆ ಹೊರಟ ಸಂದರ್ಭ ನನಗೆ ಮೊದಲು ನೆನಪಿಗೆ ಬಂದದ್ದು ನನ್ನ ಮಾತೃಭಾಷೆ. ಕನ್ನಡ ಭಾಷೆ ನನಗೆ ಗೊತ್ತಿದೆ. ತಮಿಳು ತೆಲುಗಿಗಿಂತಲೂ ಇಲ್ಲಿಯ ಮಣ್ಣು ನನಗೆ ಗೊತ್ತು. ಹಾಗಾಗಿ ನಿರ್ದೇಶನವನ್ನು ಮಾಡುತ್ತಿದ್ದರೆ ಮೊದಲು ಕನ್ನಡ ನೆಲದಲ್ಲಿಯೇ ಅಂದುಕೊಡಿದ್ದೆ ಎನ್ನುತ್ತಾರೆ ಕನ್ನಡಿಗರ ಹೆಮ್ಮೆಯ ಈ ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ.

ಪ್ರಕಾಶ್ ರೈ ಮಗಳ ಪಾತ್ರಕ್ಕೆ ರಮ್ಯಾ ಆಯ್ಕೆಯಾದರೂ ನಂತರ ಆಕೆ ಸಂಭಾವನೆ ಕಾರಣ ಕೈಕೊಟ್ಟದ್ದಕ್ಕೆ ಆ ಪಾತ್ರ ಅಮೂಲ್ಯ ಪಾಲಿಗೆ ಒಲಿಯಿತು. ಈಗ ಚಿತ್ರ ನಿರಾಯಾಸವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಗಿದಿದೆ. ನಿರ್ದೇಶಕನಾಗಿ ಪ್ರಕಾಶ್ ರೈ ಭಡ್ತಿಯನ್ನೂ ಪಡೆದಿದ್ದಾರೆ. ಒಟ್ಟಾರೆ ಗಾಂಧಿನಗರದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ, ನಿರೀಕ್ಷೆ ಇದೆ.

PR
ನನ್ನವನು: ಐಂದ್ರಿತಾ ರೇ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ನನ್ನವನು ಚಿತ್ರವೂ ತೆರೆಕಾಣಲಿದೆ. ಈ ಚಿತ್ರ ಕೆಲ ವಾರ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ ಈ ವಾರ ಅದಕ್ಕೆ ಕಾಲ ಕೂಡಿ ಬಂದಿದೆ. ಮೂರು ಚಿತ್ರಗಳ ಜತೆ ಪೈಪೋಟಿಗೆ ಇಳಿದಂತೆ ಈ ಚಿತ್ರ ಬಿಡುಗಡೆ ಆಗುತ್ತಿದೆ. ಪಿ. ತುಳಸಿಗೋಪಾಲ್ ನಿರ್ಮಪಕರಾಗಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತವಿದೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಶ್ರೀನಿವಾಸರಾಜು ವಹಿಸಿದ್ದಾರೆ.

ನನ್ನವನು ಚಿತ್ರದಲ್ಲಿ ಸಂಭಾವನೆ ಸರಿಯಾಗಿ ಬರಲಿಲ್ಲವೆಂದು ನಟಿ ಐಂದ್ರಿತಾ ರೇ, ಚಿತ್ರತಂಡದಿಂದ ಹೊರ ಬಂದಿದ್ದಾರೆ. ಚಿತ್ರದ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಕೂಡ ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರತಂಡದ ನಡುವಿನ ಜಗಳ ಚಿತ್ರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೋ ಗೊತ್ತಿಲ್ಲ. ಒಂದು ಪ್ರೇಮಕಥೆಯ ಹಂದರ ಉಳ್ಳ ಚಿತ್ರ ಯುವಕರ ಗಮನ ಸೆಳೆಯುವಲ್ಲಿ ಯಶಸ್ಸು ಕಾಣಲಿದೆಯೋ ಗೊತ್ತಿಲ್ಲ.

ಪ್ರೀತಿಯಿಂದ ರಮೇಶ್: ಇದಲ್ಲದೆ, ರಮೇಶ್ ಅರವಿಂದ್ ಅಭಿನಯದ ಪ್ರೀತಿಯಿಂದ ರಮೇಶ್ ಚಿತ್ರವೂ ಈ ವಾರ ತೆರೆ ಕಾಣುತ್ತಿದೆ. ರಮೇಶ್ ಅಭಿನಯದ ಮತ್ತೊಂದು ಸಾಂಸಾರಿಕ ಚಿತ್ರ ಇದು. ಕಾನ್ಫಿಡೆಂಟ್ ಸಮೂಹ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಮೇಶ್ ಜತೆ ದಿಗಂತ್ ಹೆಗಡೆ ಸಹ ಇದ್ದಾರೆ. ಶಾಂತಾ ಎಂಟರ್ ಪ್ರೈಸಸ್ ಹೊರತಂದಿರುವ ಈ ಚಿತ್ರದ ನಿರ್ಮಾಪಕರು ಎನ್. ರವಿಕುಮಾರ್. ಗುಣಕುಮಾರ್ ನಿರ್ದೇಶನವಿದೆ. ರಮೇಶ್ ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಹೊಂದಿದ್ದಾರೆ.

ತರಂಗಿಣಿ: ಮೋಹನ್, ಬಿ.ಸಿ. ಪಾಟೀಲ್ ಅಭಿನಯದ ತರಂಗಿಣಿ ಚಿತ್ರವೂ ಈ ವಾರ ತೆರೆ ಕಾಣುತ್ತಿದೆ. ಮೋಹನ್‌ಗೆ ಈ ಚಿತ್ರದಿಂದ ಬ್ರೆಕ್ ಸಿಗುತ್ತೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಬಿ.ಸಿ. ಪಾಟೀಲರಿಗೆ ತಮ್ಮ ಅಭಿನಯ ಕಲೆಯನ್ನು ಮತ್ತೊಮ್ಮೆ ಸಾಬೀತುಪಡಿಸಲು ಇದೊಂದು ವೇದಿಕೆ ಆಗಲಿದೆ. ಉಷಾ ನವರತ್ನರಾಂ ಅವರ ಕಾದಂಬರಿ ಆಧಾರಿತ ಈ ಚಿತ್ರ ಉತ್ತಮ ಕಥಾ ಹಂದರ ಒಳಗೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಚಿತ್ರದಲ್ಲಿ ಮೊದಲ ಬಾರಿಗೆ ಪತ್ರಕರ್ತೆಯಾಗಿ ನಟಿ ತೇಜಸ್ವಿನಿ ನಟಿಸಿದ್ದಾರೆ. ಡಿ.ಬಿ. ರಾಮಕುಮಾರ್ ನಿರ್ಮಾಪಕರಾಗಿದ್ದು, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಶ್ರೀನಿವಾಸ್ ಕೌಶಿಕ್ ನೆರವೇರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾನು ನನ್ನ ಕನಸು, ಪ್ರಕಾಶ್ ರೈ, ಅಮೂಲ್ಯ, ಐಂದ್ರಿತಾ ರೇ, ಪ್ರಜ್ವಲ್, ತರಂಗಿಣಿ, ಪ್ರೀತಿಯಿಂದ ರಮೇಶ್, ನನ್ನವನು