ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ನೂರು ಜನ್ಮಕೂ.... ತೆರೆಯೇರಲು ಸಿದ್ಧ
(Nagatihalli Chandrashekhar | Aindritha Ray | Nooru Janmaku | Kannada Film | Kannada Cinema)
ನಾಗತಿಹಳ್ಳಿ ಚಂದ್ರಶೇಖರ್ ಒಬ್ಬ ಅತ್ಯುತ್ತಮ ನಿರ್ದೇಶಕ ಎಂಬುದರಲ್ಲಿ ಎರಡು ಮಾತಿಲ್ಲ. ಹೊಸ ಹುಡುಗರನ್ನು ಹಾಕಿಕೊಂಡು ಚಿತ್ರ ಮಾಡಿ ಗೆಲ್ಲುತ್ತಾರೆ. ಇವರ ಗೆಲುವಿನ ಓಟ ಅಲ್ಲಲ್ಲಿ ನಿಲ್ಲುತ್ತೆ, ಸಾಗುತ್ತೆ. ಒಟ್ಟಾರೆ ಎಲ್ಲೂ ಸಂಪೂರ್ಣ ನಿಂತಿಲ್ಲ. ಇದೀಗ ತಮ್ಮ ವೇಗ ಹೆಚ್ಚಿಸುವ ಇನ್ನೊಂದು ಕುದುರೆ ಏರಿ ಹೊರಡಲು ಅಣಿಯಾಗಿದ್ದಾರೆ. ಈ ಕುದುರೆ ಬರುವ ಶುಕ್ರವಾರ ಓಟ ಆರಂಭಿಸಲಿದೆ.
ಹೌದು. ಇವರ ಮಹತ್ವಾಕಾಂಕ್ಷೆಯ ಚಿತ್ರವಾದ ನೂರು ಜನ್ಮಕು ಶುಕ್ರವಾರ ತೆರೆ ಕಾಣುತ್ತಿದೆ. ಸದಾ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿರುವ ನಾಗತಿಹಳ್ಳಿ ಇಲ್ಲೂ ಅಂತ ಒಂದು ಸಾಧನೆ ಮಾಡಿದ್ದಾರೆ.
'ಅಮೆರಿಕಾ ಅಮೆರಿಕಾ' ಚಿತ್ರದ ಹಾಡೊಂದರ ಸಾಲಿನಲ್ಲಿ ಬರುವ 'ನೂರು ಜನ್ಮಕು...' ಸಾಲು ಚಿತ್ರದ ಹೆಸರಾಗಿ ಲಭಿಸಿದೆ. ಇದೊಂದು ತಾತ್ಕಾಲಿಕ ಹೋಲಿಕೆ ಅಷ್ಟೆ. ಅಮೇರಿಕಾ...ದ ಮುಂದುವರಿದ ಭಾಗ ಇದಲ್ಲ. ಇದರ ವಿಭಿನ್ನ ಶೈಲಿ ಪ್ರೇಕ್ಷಕರನ್ನು ಮುಟ್ಟಲಿದೆ ಹಾಗೂ ತಟ್ಟಲಿದೆ ಎಂಬ ವಿಶ್ವಾಸ ತಮಗಿದೆ ಎನ್ನುತ್ತಾರೆ.
ಚಿತ್ರದ ಶೇ.40 ಭಾಗ ವಿದೇಶದಲ್ಲಿ ಆಗಿದೆ. ಚಿತ್ರಕ್ಕೆ ಸರಿ ಸುಮಾರು ಮೂರು ಕೋಟಿ ಖರ್ಚಾಗಿದೆ ಎನ್ನುತ್ತಾರೆ ನಾಗತಿ. ಸಿನಿಮಾ ಸಿದ್ಧವಾಗಲು 60 ದಿನ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿವೆ. ಮನೋಮೂರ್ತಿ ಇದಕ್ಕೆ ಮಧುರ ಸಂಗೀತ ನೀಡಿದ್ದಾರೆ. ಕ್ಯಾಮೆರಾದಲ್ಲಿ ಸಂತೋಷ್ ಕುಮಾರ್ ಪಾತಾಜೆ ಬಗ್ಗೆ ಹೇಳುವುದೇ ಬೇಡ. ಶಶಿಧರ ಅಡಪ ಕಲಾ ವಿನ್ಯಾಸದಲ್ಲಿ ಸಾಕಷ್ಟು ಕಲಾತ್ಮಕತೆ ವ್ಯಕ್ತಪಡಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವಿದೇಶಿ ನೆಲದ ಸಂಸ್ಕೃತಿ, ಮಣ್ಣಿನ ಸಂಪರ್ಕದ ನಡುವೆ ಕಥೆ ಸಾಗಲಿದೆ. ಇದರಿಂದ ಹೊರದೇಶದಲ್ಲಿ ಶೂಟಿಂಗ್ ನಡೆಸಲಾಗಿದೆ. ಇದಲ್ಲದೇ ಮೂರು ಹಾಡುಗಳು ಕೂಡ ವಿದೇಶದಲ್ಲಿಯೇ ಚಿತ್ರೀಕರಣಗೊಂಡಿವೆ.
ಚಿತ್ರದಲ್ಲಿ ನಾಯಕ, ನಾಯಕಿ ಇಬ್ಬರೂ ಉದ್ಯೋಗಸ್ಥರು. ಹೆಸರು, ಯಶಸ್ಸು ಮತ್ತು ಹಣ ಗಳಿಸುವ ವೇಗದಲ್ಲಿ ಏನೇನೋ ಘಟನೆಗಳು ನಡೆಯುತ್ತವೆ. ಇದಕ್ಕೆ ಆರ್ಥಿಕ ಹಿಂಜರಿತ ಹೇಗೆ ಪ್ರಭಾವ ಬೀರುತ್ತದೆ ಎಂಬಿತ್ಯಾದಿ ವಿಚಾರಗಳ ವ್ಯಾಪಕ ಚರ್ಚೆ- ಸಂವಾದ-ವಿಮರ್ಶೆಗಳು ಚಿತ್ರದಲ್ಲಿ ನಡೆದಿವೆ. ಗಂಭೀರ ವಿಷಯವಿದ್ದರೂ ಅದನ್ನು ಅತ್ಯಂತ ನವಿರಾಗಿ ಪರದೆಯ ಮುಂದೆ ತಂದಿಡಲಾಗಿದೆ.