ಈ ಶುಕ್ರವಾರ ಎರಡು ಚಿತ್ರಗಳು ತೆರೆ ಕಾಣುತ್ತಿವೆ. ಒಂದು ಶ್ರೀಮೋಕ್ಷ ಹಾಗೂ ಇನ್ನೊಂದು ತಮಸ್ಸು. ಶಿವರಾಜ್ ಕುಮಾರ್ ಅಭಿನಯದ ಸಾಮಾಜಿಕ ಅಂಶವನ್ನು ಒಳಗೊಂಡ ಚಿತ್ರ ತಮಸ್ಸು. ಅಗ್ನಿ ಶ್ರೀಧರ್ ನಿರ್ದೇಶನದ ಈ ಚಿತ್ರ ಸಾಕಷ್ಟು ವಿವಾಹದಗಳ ನಂತರ ಇದೀಗ ತೆರೆ ಕಾಣುತ್ತಿದೆ.
ಕ್ಷುಲ್ಲಕ ಕಾರಣಕ್ಕೆ ಹುಟ್ಟಿಕೊಳ್ಳುವ ಹಿಂದೂ ಮುಸ್ಲಿಂ ಗಲಭೆಯಲ್ಲಿ ಪ್ರಾಣ ಕಳೆದುಕೊಳ್ಳುವ ಜನರ ಪಾಡಿನ ಕುರಿತಾದ ಚಿತ್ರ ಇದು. ಇಲ್ಲಿ ಗಲಭೆಯ ನಡುವೆಯೇ ಪ್ರೇಮ ಚಿಗುರುವ ಉತ್ತಮ ಹೊಂದಾಣಿಕೆಯನ್ನು ತೋರಿಸಲಾಗಿದೆ. ಇದರಲ್ಲಿ ಶಿವರಾಜ್ ಕುಮಾರ್ ಆಡಿದ ಕೆಲ ಡೈಲಾಗ್ ಬಗ್ಗೆ ಭಾರೀ ವಿವಾದವೆದ್ದಿದ್ದನ್ನೂ ಇಲ್ಲಿ ಸ್ಮರಿಸಬಹುದು. ಯುವ ನಟಿ ಹರ್ಷಿಕಾ ಪೂಣಚ್ಚ ಶಿವಣ್ಣನ ಸಹೋದರಿಯ ಪಾತ್ರದಲ್ಲಿ ನಟಿಸಿದರೆ, ತೆಲುಗಿನ ಪದ್ಮಪ್ರಿಯಾ ಚಿತ್ರದ ನಾಯಕಿ.
ಇನ್ನು ಶ್ರೀಮೋಕ್ಷ ಚಿತ್ರ ಸಚಿನ್ ಸುವರ್ಣರಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಮೂಡಿಬಂದಿದೆ. 'ಎನ್ಕೌಂಟರ್ ದಯಾ ನಾಯಕ್' ನಂತರ ಇದೊಂದು ವಿಭಿನ್ನ ಚಿತ್ರದಲ್ಲಿ ಸಚಿನ್ ನಟಿಸುತ್ತಿದ್ದಾರೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ಮಂಗಳೂರಿನ ಮೀನುಗಾರ ಹುಡುಗನೊಬ್ಬ ಮುಂಬೈ ಭೂಗತ ಜಗತ್ತಿನ ಪಾತಕಿಗಳ ಕೈಸಿಕ್ಕು ಹೇಗೆ ಬದಲಾಗುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಒಟ್ಟಾರೆ ಮುಂಬೈ ಭೂಗತ ಜಗತ್ತು ಹಾಗೂ ಮಂಗಳೂರಿನ ನಡುವೆ ಇರುವ ಸಂಬಂಧವನ್ನು ಈ ಚಿತ್ರ ತೋರಿಸಲಿದೆ. ಕೇಶವ್ ಶೆಟ್ಟಿ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.