ಈ ವಾರ ಬಹುನಿರೀಕ್ಷೆಯ ಕೃಷ್ಣನ್ ಲವ್ ಸ್ಟೋರಿ ಹಾಗೂ ಪುಂಡ ಚಿತ್ರಗಳು ತೆರೆಕಾಣುತ್ತಿವೆ. ಅಜಯ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಕೃಷ್ಣನ್ ಲವ್ ಸ್ಟೋರಿ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳಿವೆ. ಅದಕ್ಕೆ ಕಾರಣ ಮೊಗ್ಗಿನ ಮನಸು ಚಿತ್ರ ನೀಡಿದ ನಿರ್ದೇಶಕ ಶಶಾಂಕ್. ಇದೇ ವೇಳೆ ಪುಂಡ ಕೂಡಾ ಸಾಕಷ್ಟು ಹವಾ ಸೃಷ್ಟಿಸಿದ್ದು, ಯೋಗೀಶ್ ಪಾಲಿಗೆ ಇದು ಸವಾಲಿನ ಚಿತ್ರ. ಈಗಾಗಲೇ ಹಲವಾರು ಸೋಲುಗಳನ್ನು ಕಂಡಿರುವ ಯೋಗೀಶ್ ಈ ಚಿತ್ರದಲ್ಲಾದರೂ, ಗೆಲುವು ಕಾಣುವುದು ಅಗತ್ಯವಾಗಿದೆ. ಚಿತ್ರದಲ್ಲಿ ಪ್ರಮೀಳಾ ಜೋಷಾಯ್ ಸುಂದರ್ ರಾಜ್ ದಂಪತಿಯ ಪುತ್ರಿ ಮೇಘನಾ ರಾಜ್ ಪಾಲಿಗೆ ಇದು ಚೊಚ್ಚಲ ಕನ್ನಡ ಚಿತ್ರವಾದ್ದರಿಂದ ಆಕೆಗೂ ಇದು ಭರ್ಜರಿ ಪರೀಕ್ಷೆಯೇ ಸರಿ.
MOKSHA
ಪುಂಡ: ಇದು ಒಂದು ಬೈಕ್ ಸುತ್ತ ಹೆಣೆದ ಚಿತ್ರ. ನಾಯಕ ಬೈಕ್ ಕೊಳ್ಳಲು ಪಾಲಕರನ್ನು ಪೀಡಿಸುತ್ತಾನೆ. ಕೊಂಡ ನಂತರ ಆ ಬೈಕಿನಿಂದಾಗಿ ಆತ ಹೇಗೆ ಬದಲಾಗುತ್ತಾನೆ ಅನ್ನುವ ಕಥೆಯನ್ನು ಆಧರಿಸಿ ಇದೆ. ನಾಯಕನಾಗಿ ಯೋಗೀಶ್ ಇದ್ದಾರೆ. ನಟಿಯಾಗಿ ಮೇಘನಾ ರಾಜ್ ಅಭಿನಯಿಸಲಿದ್ದಾರೆ. ಎಚ್. ವಾಸು ಚಿತ್ರದ ನಿರ್ದೇಶಕರು. ಪ್ರಕಾಶ್ ಸಂಕಲನ, ಕೇಶವ್ ಚಂದ್ರ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆ. ಒಟ್ಟಾರೆ ಉತ್ತಮ ಚಿತ್ರ ತಂಡ ಹೊಂದಿರುವ ಈ ಸಿನಿಮಾದಲ್ಲಿ ನಟ ಅವಿನಾಶ್ ಸಹ ಇದ್ದಾರೆ. ನಿರ್ಮಾಪಕರು ವಿ. ಕುಪ್ಪುಸ್ವಾಮಿ ಹಾಗೂ ಬಿ. ಸುರೇಶ್ ಚೌದರಿ.
MOKSHA
ಕೃಷ್ಣನ್ ಲವ್ ಸ್ಟೋರಿ: ಹೆಸರೇ ಹೇಳುವಂತೆ ಪ್ರೇಮಕಥೆಯನ್ನು ಮೂಲ ವಸ್ತುವಾಗಿ ಹೊಂದಿರುವ ಈ ಚಿತ್ರವನ್ನು ಉದಯ್ ಕೆ. ಮೆಹ್ತಾ ಹಾಗೂ ಮೋಹನ್ ಜಿ. ನಾಯಕ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಯು ಹಾಗೂ ಎ ಸರ್ಟಿಪಿಕೆಟ್ ನೀಡಿದೆ. ವಿಭಿನ್ನ ಕಥಾ ಹಂದರ ಉಳ್ಳ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ. ಇವರೇ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಯಕರಾಗಿ ಅಜಯ್ ಮತ್ತು ನಾಯಕಿಯಾಗಿ ರಾಧಿಕಾ ಪಂಡಿತ್ ಇದ್ದಾರೆ. ವಿ. ಶ್ರೀಧರ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಶೇಖರ್ ಚಂದ್ರ ಅವರದ್ದು. ಕೆ.ಎಂ. ಪ್ರಕಾಶ್ ಸಂಕಲನ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಶಶಾಂಕ್ ಗೀತ ರಚನೆ, ರವಿವರ್ಮ ಸಾಹಸ ನಿರ್ದೇಶನ ಲಭಿಸಿದೆ. ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರಕ್ಕೆ ಸಿ.ಎಚ್. ಸುರೇಶ್ ಹಾಗೂ ಎಚ್. ಲೋಕೇಶ್ ಸಹ ನಿರ್ಮಾಪಕರಾಗಿ ಇದ್ದಾರೆ.