ಭ್ರಷ್ಟರ ವಿರುದ್ಧ ಕೆಂಪು ಕ್ರಾಂತಿಗಾಗಿ ಬರುತ್ತಿದೆ 'ತ್ಯಾಗು'..!
ಮೂರು ವರ್ಷಗಳ ನಂತರ ಕೊನೆಗೂ 'ತ್ಯಾಗು' ಚಿತ್ರ ಸದ್ದು ಮಾಡತೊಡಗಿದೆ. 2007ರಲ್ಲಿ ಚಿತ್ರೀಕರಣ ಆರಂಭಗೊಂಡ 'ತ್ಯಾಗು'ವನ್ನು ಮಾರ್ಚ್ 25ರಂದು ತೆರೆಗೆ ತರಲು ನಿರ್ದೇಶಕ ವೆಂಕಟೇಶ್ ಸಜ್ಜಾಗಿದ್ದಾರೆ ಎಂದು ಚಿತ್ರದ ನಾಯಕ ನಟ ದೀಪಕ್ ತಿಳಿಸಿದ್ದಾರೆ.
ನೀತು ಈ ಚಿತ್ರದ ನಾಯಕಿ. ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ವೆಂಕಟೇಶ್ ಹೊತ್ತಿದ್ದಾರೆ. 'ಹಣಕಾಸಿನ ಸಮಸ್ಯೆ ಸೇರಿದಂತೆ ಕಾರಣಾಂತರದಿಂದ ಚಿತ್ರದ ಬಿಡುಗಡೆ ವಿಳಂಬವಾಯಿತು. ಜತೆಗೆ ಸೆನ್ಸಾರ್ ಮಂಡಳಿ ಕಾಟದಿಂದ ಇಷ್ಟು ವರ್ಷ ತಡವಾಯಿತು' ಎಂದಿದ್ದಾರೆ ವೆಂಕಟೇಶ್.
'ಈ ಚಿತ್ರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲಿದೆ. ಹಸಿರು ಕ್ರಾಂತಿಗಿಂತ ಈ ದೇಶದಲ್ಲಿ ಕೆಂಪು ಕ್ರಾಂತಿ ಆಗಬೇಕಿದೆ ಹಾಗಾದಲ್ಲಿ ಮಾತ್ರ ಭ್ರಷ್ಟಾಚಾರ ಕಡಿಮೆ ಆಗಲಿದೆ' ಎಂದು ಅವರು ಹೇಳಿಕೊಂಡರು.
ಸೂರು ಇಲ್ಲದವರು ಹೋರಾಡುವ ಕಥೆಯನ್ನು 'ತ್ಯಾಗು' ಹೊಂದಿದೆ. ಬಳ್ಳಾರಿ ಜೈಲಿನಿಂದ ಹಿಡಿದು ಬೆಂಗಳೂರಿನ ಹಲವು ಬಾರ್‌ಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಈ ಚಿತ್ರದ ಮೂಲಕ ನಾಯಕ ದೀಪಕ್‌ಗೆ ಯಶಸ್ಸು ಲಭಿಸಲಿದೆ ಎಂಬುದು ನಿರ್ದೇಶಕರ ಅಭಿಮತ.
ರಂಗಾಯಣ ರಘು ಭೂಗತ ಲೋಕದ ಡಾನ್ ಆಗಿ ಅಭಿನಯಿಸಿದ್ದಾರೆ. ಯಶೋವರ್ಧನ್ ಸಂಗೀತ ನಿರ್ದೇಶಿಸಿದ್ದಾರೆ. ಮಹಂತೇಶ್ ಅವರ ಛಾಯಾಗ್ರಹಣವಿದೆ. ಇದು ಒಂದು ಒಳ್ಳೆಯ ಚಿತ್ರವಾಗುವ ಭರವಸೆ ಇದೆ ಎಂಬ ವಿಶ್ವಾಸ ವೆಂಕಟೇಶ್ ಅವರದು.
ದೀಪಕ್ ಅಭಿನಯಿಸಿರುವ 'ದೀನ' ಹಾಗೂ '18ನೇ ಕ್ರಾಸ್' ಚಿತ್ರಗಳು ಇನ್ನಷ್ಟೇ ಬಿಡುಗಡೆ ಕಾಣ ಬೇಕಾಗಿದೆ. ಆದರೆ ಆ ಚಿತ್ರಗಳು ಯಾವಾಗ ಬಿಡುಗಡೆಯಾಗುತ್ತವೋ ಗೊತ್ತಿಲ್ಲ ಎಂಬ ವಿಷಾದ ನಾಯಕ ದೀಪಕ್ ಅವರದು.