ನೈಜ ಘಟನೆಯನ್ನು ಆಧರಿಸಿದ 'ದುಷ್ಟ' ಚಿತ್ರೀಕರಣ ಮುಗಿದಿದೆ. 'ನನ್ನ ಸ್ನೇಹಿತನೋರ್ವನ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ 'ದುಷ್ಟ'ದಲ್ಲಿ ಯಥಾವತ್ತಾಗಿ ತೆರೆದಿಟ್ಟಿದ್ದೇನೆ ಎಂದಿದ್ದಾರೆ ನಿರ್ದೇಶಕ ಎಸ್.ನಾರಾಯಣ್.
ಚಿತ್ರೀಕರಣ ಪೂರ್ಣಗೊಂಡ ಸಂತಸವನ್ನು ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ್, '1979ರಲ್ಲಿ ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಗಳನ್ನು ದುಷ್ಟ ಚಿತ್ರ ಆಧರಿಸಿದೆ' ಎಂದರು.
ಘಟನೆಗಳು ನಡೆದ ಸ್ಥಳಗಳಾದ ಭದ್ರಾವತಿ, ಆಗುಂಬೆ ಸುತ್ತಮುತ್ತಲಲ್ಲೇ ಚಿತ್ರೀಕರಣ ನಡೆಸಲಾಗಿದೆ. 'ದುಷ್ಟ' ಚಿತ್ರಕ್ಕೆ ಮೈಸೂರು, ಮಂಡ್ಯ ಭಾಗಗಳ ಆಡುಭಾಷೆಯನ್ನು ಬಳಸಿಕೊಳ್ಳಲಾಗಿದ್ದು ಅಲ್ಲಿನ ಜನರನ್ನೇ ಕರೆಸಿ ಡಬಿಂಗ್ ಮಾಡಲಾಗಿದೆ.
ನನ್ನ ಹಳೆಯ ಸ್ನೇಹಿತನ ಪಾತ್ರಕ್ಕೆ ಹಲವರ ಸಂದರ್ಶನ ಮಾಡಿದೆನಾದರೂ ಯಾರೂ ಪಾತ್ರಕ್ಕೆ ಸರಿ ಹೊಂದಿರಲಿಲ್ಲ. ಹಾಗಾಗಿ ಕೊನೆಗೆ ಆ ಪಾತ್ರಕ್ಕೆ ನನ್ನ ಮಗನನ್ನೇ ಆರಿಸಿಕೊಂಡೆ. ಈ ಚಿತ್ರದಲ್ಲಿ ಯಾವುದೇ ಕಾಲ್ಪನಿಕ ಸನ್ನಿವೇಶಗಳಿಲ್ಲ. ಎಲ್ಲವೂ ನೈಜ ಘಟನೆಗಳನ್ನೇ ಆಧರಿಸಿವೆ ಎಂದರು ನಾರಾಯಣ್.
ನಿರ್ಮಾಣ, ನಿರ್ದೇಶನದ ಜತೆಗೆ ಸಂಗೀತ ನಿರ್ದೇಶನದ ಹೊಣೆಯನ್ನೂ ನಾರಾಯಣ್ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸ್ಥಳೀಯ ಕಲಾವಿದರನ್ನು ಮತ್ತು ಸ್ಥಳೀಯ ವಾದ್ಯಗಳನ್ನೇ ಬಳಸಿಕೊಳ್ಳಲಾಗಿದ್ದು, ಹಾಡುಗಳನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲಾಗುವುದು. ವಿಶ್ವ ಕಪ್ ಕ್ರಿಕೆಟ್ ಟೂರ್ನಿ ಪೂರ್ಣಗೊಂಡ ಬಳಿಕವಷ್ಟೆ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ ನಾರಾಯಣ್.