'ರಾಜಧಾನಿ'ಯ ಯಶಸ್ಸಿನ ಹೆಗಲ ಮೇಲೆ 'ಕಿರಾತಕ'ನ ಸವಾರಿ....!!
ಬುಧವಾರ, 22 ಜೂನ್ 2011( 12:33 IST )
WD
WD
ನಾಡಿದ್ದು ಶುಕ್ರವಾರ ಬಿಡುಗಡೆಯಾಗಲಿರುವ 'ಕಿರಾತಕ' ಚಿತ್ರದ ಕುರಿತು ಎಲ್ಲರೂ ಕಣ್ಣು ನೆಟ್ಟಿದ್ದಾರೆ. ಅದಕ್ಕೆ ಕಾರಣಗಳು ಬಹಳಷ್ಟಿವೆ. ಈ ಚಿತ್ರದ ನಾಯಕನಟ 'ಯಶ್' ನಟಿಸಿರುವ ಮತ್ತೊಂದು ಚಿತ್ರವಾದ 'ರಾಜಧಾನಿ' ಈಗಾಗಲೇ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದು ಅದು 'ಕಿರಾತಕ'ಚಿತ್ರಕ್ಕೆ 'ಕ್ರೌಡ್ ಪುಲ್ಲರ್' ಆಗಿ ಪರಿಣಮಿಸಲಿದೆ ಎಂಬುದು ಒಂದು ಕಾರಣವಾದರೆ, 'ಶ್ರೀರಂಗ್‌ಪಟ್ಣ, ಪಾಂಡವ್‌ಪುರ, ರಂಗನ್‌ತಿಟ್ಟು, ಕುಂತಿಬೆಟ್ಟ' ಎಂಬ ಹಾಡು ಈಗಾಗಲೇ ವಾಹಿನಿಗಳಲ್ಲಿ ಅಪರಿಮಿತ ಮೆಚ್ಚುಗೆಯನ್ನು ಪಡೆದಿದ್ದು ಅದರಲ್ಲಿ ಯಶ್ ಹಾಕಿರುವ ನೃತ್ಯದ ಹೆಜ್ಜೆಗಳು ಪಡ್ಡೆಹುಡುಗರನ್ನು ಥಿಯೇಟರ್‌ಗೆ ಮತ್ತೆ ಮತ್ತೆ ಕರೆತರಲಿವೆ ಎಂಬ 'ಹವಾ' ಈಗಾಗಲೇ ಬೆಂಗಳೂರಿನ ತುಂಬೆಲ್ಲಾ ವ್ಯಾಪಿಸಿಕೊಂಡಿದೆ.
ಈ ಚಿತ್ರಕ್ಕೆಂದು ಹೊರಾಂಗಣ ಚಿತ್ರೀಕರಣದ ತಾಣಗಳ ತಲಾಶೆಯಲ್ಲಿದ್ದ ನಿರ್ದೇಶಕರು ಮಂಡ್ಯ ಜಿಲ್ಲೆಯ ಒಂದಷ್ಟು ತಾಣಗಳ ಹೆಸರನ್ನೇ ಬಳಸಿಕೊಂಡು ಈ ಹಾಡನ್ನು ಕಟ್ಟಿಕೊಟ್ಟಿದ್ದು ಅದೇ ಹಾಡು ಜನರನ್ನು ಸೆಳೆಯುವ ಮಾನದಂಡವಾಗಲಿದೆ ಎಂಬುದು ಚಿತ್ರೋದ್ಯಮಿಗಳ ಅಂಬೋಣ. ಇಡೀ ಚಿತ್ರದಲ್ಲಿ'ಮಂಡ್ಯ' ಎಂಬ ಪರಿಕಲ್ಪನೆ ಹಲವು ಹನ್ನೊಂದು ರೂಪಗಳಲ್ಲಿ ಹೊರಹೊಮ್ಮಿರುವುದು ಈ ಚಿತ್ರದ ವಿಶೇಷವಂತೆ. ಆ ಭಾಗದಲ್ಲಿ ತುಂಟ ಹುಡುಗರನ್ನು ತಮಾಷೆಗೆ 'ಕಿರಾತಕ' ಎಂದು ಕರೆಯುವುದು ವಾಡಿಕೆ. ಅದೇ ಹೆಸರನ್ನು ತಮ್ಮ ಚಿತ್ರಕ್ಕೆ ಇರಿಸಿಕೊಂಡಿರುವ ನಿರ್ದೇಶಕ ಪ್ರದೀಪ್‌ರಾಜ್, ಚಿತ್ರದಲ್ಲೂ ಸಹ ಮಂಡ್ಯದ ಗ್ರಾಮ್ಯಭಾಷೆಯನ್ನೇ ಯಶ್ ಬಾಯಲ್ಲಿ ಆಡಿಸಿರುವುದು ಮತ್ತಷ್ಟು ನೀರೀಕ್ಷೆಯನ್ನು ಹುಟ್ಟುಹಾಕಿದೆ.
ಹೀಗಾಗಿ ಇದು ಮೂಲತಃ ತಮಿಳಿನ ಚಿತ್ರವೊಂದರ ರೀಮೇಕ್ ಆಗಿದ್ದರೂ, ಅಪ್ಪಟ ಕನ್ನಡ ಚಿತ್ರವೆಂಬ ರೀತಿಯಲ್ಲಿ ಇಲ್ಲಿನ ಸೊಗಡನ್ನು ಮನೋಹರ್ ತಮ್ಮ ಸಂಗೀತದಲ್ಲಿ ತುಂಬಿದ್ದಾರೆ ಹಾಗೂ ಅದು ಈಗಾಗಲೇ ಜನರಿಗೆ ಇಷ್ಟವಾಗಿದೆ ಎಂಬುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಚಿತ್ರದ ನಾಯಕಿ ಪಾತ್ರದಲ್ಲಿ ಅಭಿನಯಿಸಿರುವ ಓವಿಯಾ ಮೂಲತಃ ಮಲಯಾಳದವರು. ಮೂಲ ತಮಿಳು ಚಿತ್ರದಲ್ಲಿ ಮಾತ್ರವಲ್ಲದೇ ಕನ್ನಡದ ರೂಪಾಂತರದಲ್ಲಿ ಅಭಿನಯಿಸಿರುವುದರಿಂದ ಹಾಗೂ ತೆಲುಗಿನಲ್ಲಿ ಬರುತ್ತಿರುವ ರೂಪಾಂತರದಲ್ಲೂ ಅವರು ಅಭಿನಯಿಸುತ್ತಿರುವುದರಿಂದ ಇದೊಂದು 'ಗಟ್ಟಿ ಸಬ್ಜೆಕ್ಟ್' ಎಂಬ ಅಂಶ ಚಿತ್ರರಸಿಕರಲ್ಲಿ ಈಗಾಗಲೇ ಬೇರೂರಿದ್ದು ಅದು ಚಿತ್ರದ ಯಶಸ್ಸಿಗೆ ಕಾರಣವಾಗಲಿದೆ ಎಂಬ ಭರವಸೆಯನ್ನು ಚಿತ್ರತಂಡದಲ್ಲಿ ಮೂಡಿಸಿದೆ.
ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ತಾರಾ ಮತ್ತು ನಾಗಾಭರಣ ನಟಿಸಿದ್ದು, ದೃಶ್ಯವೊಂದರಲ್ಲಿ ಸಂಪೂರ್ಣ ಲೀನರಾಗಿದ್ದ ನಾಗಾಭರಣರು ಕೆನ್ನೆಗೆ ಬಾರಿಸುವಂತೆ ನಟಿಸಬೇಕಿದ್ದ ಸಂದರ್ಭದಲ್ಲಿ ತಾರಾರವರಿಗೆ ನಿಜವಾಗಿಯೂ ತಪರಾಕಿ ಬಾರಿಸಿದರಂತೆ. ಈ ನೋವನ್ನೂ ಹಾಗೂ ನಾಗಾಭರಣರೊಂದಿಗೆ ನಟಿಸಿದ ನಲಿವನ್ನೂ ತಾರಾ ಈಗಾಗಲೇ ರಂಜನೀಯವಾಗಿ ಹೇಳಿಕೊಂಡಿದ್ದು, ಇದು ಈ ಚಿತ್ರದ ನೀರೀಕ್ಷೆಯು ಹೆಚ್ಚಲು ಕಾರಣವಾಗಿದೆ.
ಚಿತ್ರ ಯಶಸ್ಸು ಕಂಡಿದ್ದೇ ಆದಲ್ಲಿ ಅದು ಉದ್ಯಮದಲ್ಲಿ ಮತ್ತಷ್ಟು ಹುರುಪು ತುಂಬುವುದರಲ್ಲಿ ಆಶ್ಚರ್ಯವಿಲ್ಲ.