ದಯಾಳ್, ನವೀನ್ ಕೃಷ್ಣರ ಪಾಲಿಗೆ ಬ್ರೇಕ್ ನೀಡಲಿದೆಯೇ 'ಯೋಗರಾಜ'?
EVENT
ದಯಾಳ್ ಮತ್ತು ನವೀನ್ ಕೃಷ್ಣ ಈ ಇಬ್ಬರೂ ಚಲನಚಿತ್ರದ ತಂತಮ್ಮ ವಿಭಾಗಗಳಲ್ಲಿ ಪ್ರತಿಭಾವಂತರೇ; ಆದರೆ ಅದೃಷ್ಟ ಅವರ ಕೈಹಿಡಿದು ಅವರನ್ನು ಯಶಸ್ಸಿನತ್ತ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ 'ಯೋಗರಾಜ' ಚಿತ್ರವು ಅವರಿಗೆ ಸಾಥ್ ನೀಡಲಿದೆ ಎಂದು ಈ ಚಿತ್ರದ ಪೂರ್ವ-ಪ್ರದರ್ಶನವನ್ನು ವೀಕ್ಷಿಸಿದ ಗಾಂಧಿನಗರದ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಈ ಚಿತ್ರದಲ್ಲಿ ಸುಮಾರು 18 ನಿಮಿಷಗಳ ಅವಧಿಯ ಒಂದು ವಿಶಿಷ್ಟ ದೃಶ್ಯವಿದ್ದು, ಕಿರಿತೆರೆ ಮತ್ತು ಹಿರಿತೆರೆಯ ಖ್ಯಾತ ಕಲಾವಿದರಾದ ಸುಚೇಂದ್ರ ಪ್ರಸಾದ್ ತಮ್ಮ ವಿಭಿನ್ನ ಅಭಿನಯ ಹಾಗೂ ಧ್ವನಿಯ ನೆರವಿನಿಂದ ಈ ದೃಶ್ಯಕ್ಕೆ ಜೀವ ತುಂಬಿದ್ದಾರಂತೆ. ತಮ್ಮ ಅನನ್ಯ ಕಂಠದಿಂದಲೇ ಪ್ರಸಿದ್ಧರಾಗಿರುವ ಅಮಿತಾಬ್ ಬಚ್ಚನ್, ಅಂಬರೀಷ್ ಅಥವಾ ಪ್ರಕಾಶ್ ರೈ ಈ ಮೂವರಲ್ಲಿ ಒಬ್ಬರನ್ನು ಈ ದೃಶ್ಯಕ್ಕೆ ಬಳಸಿಕೊಳ್ಳಬೇಕೆಂದು ದಯಾಳ್ ಬಯಸಿದ್ದರಂತೆ. ಆದರೆ ಗೆಳೆಯರೊಬ್ಬರು ನೀಡಿದ ಸಲಹೆಯ ಮೇರೆಗೆ ಸುಚೇಂದ್ರ ಪ್ರಸಾದ್‌ರನ್ನು ಚಿತ್ರದಲ್ಲಿ ಬಳಸಿಕೊಂಡಿದ್ದು ಅದು ಚಿತ್ರದ ಹೈಲೈಟ್ ಆಗಲಿದೆಯಂತೆ.
ಈ ಚಿತ್ರಕ್ಕೆಂದು ಸಂಭಾಷಣೆಯಲ್ಲಿ ಕೈಜೋಡಿಸುವುದರ ಜೊತೆಗೆ ನವೀನ್ ಕೃಷ್ಣ ಎರಡು ಹಾಡುಗಳನ್ನೂ ಬರೆದಿದ್ದಾರೆ. ಅವುಗಳ ಪೈಕಿ ಗೋವಾದ ಲೋಕ್‌ಸಂಗೀತ್ ಶೈಲಿಯಲ್ಲಿರುವ ಮತ್ತು ದಶಕಗಳ ಹಿಂದೆ ಹಿಂದಿ ಸಿನಿಮಾ ಒಂದರಲ್ಲೂ ಬಳಸಲ್ಪಟ್ಟಿರುವ ಟ್ಯೂನ್ ಒಂದಕ್ಕೆ ಹೊಸೆಯಲ್ಪಟ್ಟ 'ಉಲ್ಟಾ ಪದಗಳ' ಗೀತೆಯೊಂದು ಈಗಾಗಲೇ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು ಅದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನೀತೂ ಮತ್ತು ನವೀನ್ ಕೃಷ್ಣ ಅಭಿನಯಿಸಿರುವ ಈ ಗೀತೆಯು ಚಿತ್ರದ ಮತ್ತೊಂದು ಆಕರ್ಷಣೆ ಎಂಬುದಕ್ಕೆ ಅದನ್ನು ನೀತೂ ಇತ್ತೀಚೆಗೆ ವಾಹಿನಿಯ ರಿಯಾಲಿಟಿ ಷೋ ಒಂದರಲ್ಲಿ ಹಾಡಿದ್ದೇ ಸಾಕ್ಷಿ.
'ಡೈಲಾಗ್ ಡೆಲಿವರಿ'ಯಲ್ಲಿ ತಮಗಿರುವ ಸಾಮರ್ಥ್ಯವನ್ನು 'ಧಿಮಾಕು' ಚಿತ್ರದಲ್ಲಿ ಹೊರಹೊಮ್ಮಿಸಿರುವ ನವೀನ್ ಕೃಷ್ಣ 'ಯೋಗರಾಜ' ಚಿತ್ರದಲ್ಲಿನ ತಮ್ಮ ಸಂಭಾಷಣೆಯೊಂದರಲ್ಲಿ ಕನ್ನಡ ಚಿತ್ರರಂಗದ 78 ನಟರ ಹೆಸರನ್ನು ಒಂದೇ ಶಾಟ್‌ನಲ್ಲಿ ಹೇಳಿರುವುದು ಅಭಿಮಾನಿಗಳ ಶಿಳ್ಳೆ-ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳಲಿದೆ ಎನ್ನುತ್ತಾರೆ ಪೂರ್ವಭಾವಿ ಪ್ರದರ್ಶನ ನೋಡಿಬಂದ ಹಿರಿಯರೊಬ್ಬರು.