ಆತ ಸೈಕೋ. ಆದರೆ ತನ್ನ ಪ್ರಿಯತಮೆಯ ತಂಟೆಗೆ ಬಂದವರನ್ನು ಸೈಲೆಂಟಾಗಿ ಮುಗಿಸಿ ಬಿಡುತ್ತಾನೆ. ಪಾವನಾ..ಪಾವನಾ ಎಂದು ಕತ್ತಲೂ ಕೋಣೆಯಲ್ಲಿ ಕಿರುಚುತ್ತಿರುತ್ತಾನೆ.
ಆದರೆ ನಾಯಕಿಗೆ ತನ್ನ ಪ್ರಿಯತಮ ಸೈಕೋ ಎಂದು ಗೊತ್ತಾಗುವಾಗ ಸ್ವಲ್ಪ ತಡವಾಗುತ್ತದೆ. ಇದು ಒಂದೂವರೆ ವರ್ಷದಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿ ಕಡೆಗೂ ಈ ವಾರ ಬಿಡುಗಡೆಯಾದ 'ಸೈಕೋ' ಚಿತ್ರದ ಒನ್‌ಲೈನ್ ಸ್ಟೋರಿ.
ನಿರ್ದೇಶಕ ದೇವದತ್ತು ಚಿತ್ರದ ಬಗ್ಗೆ ದೊಡ್ಡದಾಗಿ ಹೈಪ್ ಕ್ರಿಯೆಟ್ ಮಾಡಿದ್ದರು. ಆದರೆ ನಿರ್ದೇಶನ ವಿಷಯಕ್ಕೆ ಬಂದಾಗ ಅವರ ಹೋಂವರ್ಕ್ ಏನೂ ಸಾಲದು. ಚಿತ್ರದಲ್ಲಿ ನಾಯಕಿ ಟಿವಿ ನಿರೂಪಕಿಯಾಗಿರುತ್ತಾಳೆ. ಮುಖ ನೋಡದೆಯೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತದೆ.
ಆದರೆ ನಾಯಕ ಅರೆಹುಚ್ಚ. ಆತ ತನ್ನ ಅಮ್ಮನಿಗೆ ಬರೆದ ಪತ್ರವನ್ನು ತಿಂದ ಅಮಾಯಕ ಜಿರಲೆಯನ್ನು ಹಣೆಯಿಂದಲೇ ಚಚ್ಚಿ ಕೊಲ್ಲುವ, ತನ್ನ ಹುಡುಗಿಗೆ ಚುಡಾಯಿಸಿದ ಎಂದು ಶಾಲಾ ಮಕ್ಕಳು ಬಳಸುವ ಕಂಪಾಸ್‌ನಿಂದ ಚುಚ್ಚಿ ಚಿಲ್ ಆಗುವ ಕೆಲವು ವಿಚಿತ್ರ ದೃಶ್ಯಗಳು ಚಿತ್ರದಲ್ಲಿವೆ.
MOKSHA
ಭಗ್ನ ಪ್ರೇಮಿಯೊಬ್ಬ ಸೈಕೋ ಆಗಿ ಯಾವ ರೀತಿ ವರ್ತಿಸುತ್ತಾನೆ ಎಂಬುದು ನಿರ್ದೇಶಕರು ಅಧ್ಯಯನ ಮಾಡಿದಂತಿಲ್ಲ. ನಿರ್ದೇಶಕರು ಇಲ್ಲಿ ಹೋಂವರ್ಕ್ ಮಾಡದೇ ಚಿತ್ರ ಮಾಡಿದ್ದಾರೆ. ಚಿತ್ರದಲ್ಲಿ ಕತ್ತಲು ಹೆಚ್ಚಿನ ಪಾತ್ರ ವಹಿಸಿದೆ. ನೆರಳು ಬೆಳಕಿನ ಸಂಯೋಜನೆಯಲ್ಲಿ ಚಿತ್ರ ಸಾಗುತ್ತದೆ. ತಾಂತ್ರಿಕವಾಗಿ ಈ ಚಿತ್ರ ಶ್ರೀಮಂತವಾಗಿದೆ ಎಂದರೆ ತಪ್ಪಲ್ಲ.
ಒಂದೂವರೆ ವರ್ಷದಿಂದ ನಾಯಕ-ನಾಯಕಿಯನ್ನು ಬಚ್ಚಿಟ್ಟ ನಿರ್ದೇಶಕರು ಅವರಿಂದ ನಟನೆ ಹೊರತೆಗೆಯುವಲ್ಲಿ ವಿಫಲರಾಗಿದ್ದಾರೆ. ಚಿತ್ರದ ನಾಯಕ ಧನುಶ್‌ಗೆ ಇಲ್ಲಿ ಒಬ್ಬ ನಾಯಕನಿಗೆ ಸಿಗಬೇಕಾದ ಮಾನ್ಯತೆ, ಬಿಲ್ಡಪ್‌ಗಳು ಸಿಕ್ಕಿಲ್ಲ.
ನಾಯಕಿ ಅನಿತಾ ಅಭಿನಯ ಏನೂ ಇಲ್ಲ. ಬಾಡಿ ಲಾಂಗ್ವೆಜ್ ಏನೂ ಎಂಬುದನ್ನು ಆಕೆಗೆ ಮೊದಲಿನಿಂದ ಬಿಡಿಸಿ ಹೇಳಬೇಕಾಗಿದೆ. ನೆರಳು ಬೆಳಕಿನ ಸಂಯೋಜನೆಯ ಚಿತ್ರ ಗೆಲ್ಲುವಂತಿದ್ದರೆ ರಾಂಗೋಪಾಲ್ ವರ್ಮಾರ ಫೂಂಕ್ ಮಕಾಡೆ ಮಲಗುತ್ತಿರಲಿಲ್ಲ ಎಂದರೆ ನಿರ್ದೇಶಕ ದೇವದತ್ತು ಬೇಸರ ಮಾಡಿಕೊಳ್ಳಬಾರದು.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ 'ನಿನ್ನಾ ಪೂಜೆಗೆ ಬಂದೆ ಮಾದೇಶ್ವರ..' ಹಾಡು ಒಂದು ಹೊಸ ಪ್ರಯತ್ನ. ಉಳಿದಂತೆ ಇತರ ಸಂಗೀತ ನಿರ್ದೇಶಕರಂತೆ ಸಾಮಾನ್ಯ ಹಾಡು ನೀಡಿದ್ದಾರೆ. ಚಿತ್ರದ ಸಂಕಲನ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಪೋಷಕ ಪಾತ್ರದಲ್ಲಿರುವ ಪದ್ಮಜಾ ರಾವ್, ವಿಜಯಸಾರಥಿ ಚೆನ್ನಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಸೈಕೋನನ್ನು ಒಮ್ಮೆ ನೋಡಿ ಬರಬಹುದು.