ಆತ ಕಾಲೇಜು ಹುಡುಗ. ತನ್ನ ಪಾಡಿಗೆ ತಾನಿರುವಾಗ ರೌಡಿಗಳು ಆತನ ತಂಟೆಗೆ ಬರುತ್ತಾರೆ. ಮಗನ ಪರವಾಗಿ ಬಂದ ತಾಯಿಯ ಮೇಲೂ ಕೈ ಮಾಡಲು ಮುಂದಾಗುತ್ತಾರೆ. ಇದರಿಂದ ಸಿಟ್ಟಾದ ಮಗ ರೌಡಿಗಳಿಗೆ ಹಿಗ್ಗಾಮುಗ್ಗಾ ಥಳಿಸುತ್ತಾನೆ. ಕ್ರಮೇಣ ಆತ ಕೂಡಾ ರೌಡಿಯಾಗುತ್ತಾನೆ- ಇಂತಹ ಕಥೆಗಳನ್ನು ತುಂಬಾ ಕೇಳಿದ್ದೀವಿ. ಮತ್ತೆ ಇದ್ಯಾವುದರ ಕಥೆ ಬಿಡುತ್ತಿದ್ದಾರೆ ಎಂದು ನಿಮಗೆ ಆಶ್ವರ್ಯವಾಗಬಹುದು. ಆದರೆ ಇದು ಈ ವಾರ ತೆರೆ ಕಂಡ 'ಮಹರ್ಷಿ' ಚಿತ್ರದ 'ಅಪರೂಪದ' ಕಥೆ.
ನಿರ್ದೇಶಕ ಕೃಷ್ಣಬ್ರಹ್ಮ ಯಾರಿಗೂ ಸಿಗದಂತಹ ಕಥೆ ತಮಗೆ ಸಿಕ್ಕಿದೆ ಎಂಬಂತೆ ಬಿಲ್ಡಪ್ ತಗೊಂಡು ಒಂದು ಸಾಮಾನ್ಯ ಚಿತ್ರ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಇಂತಹ ಸಿನಿಮಾಗಳು ಎಷ್ಟು ಬಂದಿಲ್ಲ ನೀವೇ ಹೇಳಿ. ಮತ್ತೆ ಅಂತಹುದೇ ಕಥೆ ಇರುವ ಚಿತ್ರವೊಂದು ಅದು ಕೂಡಾ ಹೊಸತನವಿಲ್ಲದೆ ನಿರ್ದೇಶಿಸಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿಲು ಪ್ರಯತ್ನಿಸಿದ್ದಾರೆ.
ಗಾಂಧಿನಗರದ ಸಿದ್ಧಸೂತ್ರಗಳಿಗೆ ಜೋತು ಬಿದ್ದು, ಫೈಟ್, ಸೆಂಟಿಮೆಂಟ್, ಡ್ಯಾನ್ಸ್ ಹಾಗೂ ಐಟಂ ಸಾಂಗುಗಳನ್ನು ನಿರ್ದೇಶಕರು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಇಲ್ಲಿ ನಿರ್ದೇಶಕರು ಕಾಲೇಜು ಹುಡುಗ ಎಂದು ತೋರಿಸಲು ಪ್ರಶಾಂತ್ ತಲೆಗೆ ಬಣ್ಣ ಹಚ್ಚಿದ್ದಾರೆ. 'ಒರಟ ಐ ಲವ್ ಯೂ' ಚಿತ್ರದ ಮೂಲಕ ಭರವಸೆ ಮೂಡಿಸಿದ ಪ್ರಶಾಂತ್ ಇಲ್ಲಿ ನಿರ್ದೇಶಕರ ಕೈಗೊಂಬೆಯಾಗಿ ಏನೇನೋ ಅವತಾರ ತಾಳಿದ್ದಾರೆ.
ಲೋ ಬಜೆಟ್‌ನ ಚಿತ್ರವೆಂಬುದನ್ನು ಸಾಬೀತುಪಡಿಸಲು ಪೂಜಾಗಾಂಧಿಗೆ ವಿಚಿತ್ರ ಕಾಸ್ಟ್ಯೂಮ್ಸ್ ಬಳಸಿದ್ದಾರೆ. ಪೂಜಾ ಏನೋ ಚೇಂಜ್ ಬಯಸಿರಬೇಕು. ಅದಕ್ಕಾಗಿ ಇಂತಹ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಜಾಸ್ತಿ ಮಾತನಾಡುವ ಹಾಗಿಲ್ಲ. ಅನೇಕ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಮೊದಲೇ ಕತ್ತರಿ ಹಾಕಿದ್ದರಿಂದ ಪ್ರೇಕ್ಷಕರು ಸ್ವಲ್ಪ ಬಚಾವ್.