ಕೇವಲ ಹೊಡೆದಾಟ, ಪ್ರೇಮ ಸಲ್ಲಾಪ ಚಿತ್ರಗಳ ನಡುವೆ ಪುಣ್ಯ ಕೋಟಿಯ ಕಥೆ ಇರುವ ಒಂದು ಉತ್ತಮ ಚಿತ್ರವಾಗಿ ಅಕ್ಕ-ತಂಗಿ ಮೂಡಿಬಂದಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ಮಹೇಂದರ್ ಪ್ರಯತ್ನ ಶ್ಲಾಘನೀಯ. ಜನ ಉತ್ತಮ ಚಿತ್ರಗಳನ್ನು, ನೈತಿಕ ಮೌಲ್ಯಗಳಿರುವ ಚಿತ್ರಗಳನ್ನು ಜನ ಇಂದಿಗೂ ಮೆಚ್ಚುತ್ತಾರೆ ಎಂಬುದಕ್ಕೆ ಈ ಚಿತ್ರಕ್ಕೆ ಬರುವ ಪ್ರತಿಕ್ರಿಯೆಯೇ ಸಾಕ್ಷಿ.
ಚಿತ್ರದ ಪ್ರತಿ ಅಂಶಗಳು ಮನಸ್ಸಿಗೆ ಮುದ ನೀಡುತ್ತವೆ. ಮಲೆ ಮಹದೇಶ್ವರ ಬೆಟ್ಟದ ಸುಂದರ ವಾತಾವರಣ, ಅಲ್ಲಿನ ಭಾಷೆ, ಅದಕ್ಕೆ ಹೊಂದುವಂತಹ ಶ್ರುತಿ ಅಭಿನಯ ಎಲ್ಲವೂ ಒಟ್ಟಾಗಿ ಅಕ್ಕ-ತಂಗಿಯಾಗಿದೆ. ತಂಗಿಗಾಗಿ ತ್ಯಾಗ ಮಾಡುವ ಅಕ್ಕನಾಗಿ ಶ್ರುತಿ ಅಭಿನಯ ಮನ ಮುಟ್ಟುತ್ತದೆ. ತಂಗಿ ವೈದ್ಯೆಯಾಗಬೇಕೆಂದು ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಕಟ್ಟಿಕೊಂಡು ಹಣ ಕೂಡಿಡುವ ಪರಿ, ಅದು ಕಳವಾದಾಗ ತನ್ನ ವೈರಿ ಹುಲಿಯಪ್ಪನಲ್ಲಿ ಹೋಗಿ ಹಣ ಕೇಳುವ ಅಕ್ಕ, ಇದೇ ಸಮಯವೆಂದು ಹಣ ಕೊಡಲು ಮುಂದಾಗಿ ತನ್ನನ್ನು ಮದುವೆಯಾಗಬೇಕೆನ್ನುವ ಹುಲಿಯಪ್ಪ, ತನ್ನ ತಂಗಿಯ ಭವಿಷ್ಯಕ್ಕಾಗಿ ಅಂತಹ ಕ್ರೂರನನ್ನು ಮದುವೆಯಾಗಲು ಒಪ್ಪುವ ಅಕ್ಕ, ಕೊನೆಗೆ ಕೊಟ್ಟ ಮಾತಿಗೆ ತಪ್ಪಿ ನುಡಿದರೆ ಮೆಚ್ಚನಾ ಪರಮಾತ್ಮನು ಎಂದು ಒಡ ಹುಟ್ಟಿದ ತಂಗಿ, ತನಗಾಗಿ ಕಾದಿರುವ ನಲ್ಲನನ್ನು ಬಿಟ್ಟು ಹುಲಿಯಪ್ಪನಿಗೆ ತನ್ನನ್ನು ಒಪ್ಪಿಸುವ ಅಕ್ಕನ ಪಾತ್ರದಲ್ಲಿ ಶ್ರುತಿ ಮನ ಕಲುಕುತ್ತಾರೆ.
ಚಿತ್ರದಲ್ಲಿ ಕೆಲವೊಮ್ಮೆ ಬರುವ ಹಾಸ್ಯ ಸನ್ನಿವೇಶ ಕಿರಿಕ್ಕುಂಟು ಮಾಡುತ್ತದೆ. ತಂಗಿಯಾಗಿ ರಶ್ಮಿ ಚೆನ್ನಾಗಿ ಅಭಿನಯಿಸಿದ್ದಾರೆ. ಭಾರೀ ಸಮಯದ ನಂತರ ಕಿಶೋರ್‌ಗೆ ಒಂದು ಉತ್ತಮ ಪಾತ್ರ ಸಿಕ್ಕಿದೆ. ಸಂಗಿತ ಓಕೆ. ಒಟ್ಟಾರೆ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರ ನೀಡಿದ ಮಹೇಂದರ್‌ಗೆ ಜೈ.