ಅದ್ವಾನ ಸೃಷ್ಟಿಸಿದ 'ಗುಲಾಮ'
2009
ರ ಮೊದಲ ಚಿತ್ರ ಬಿಡುಗಡೆಯಾಗಿದೆ. ಅದು ಗುಲಾಮ. ಆದರೆ ಹೊಸ ವರ್ಷದ ಮೊದಲ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ. 20 ವರ್ಷಗಳಿಂದಲೂ ಗಾಂಧಿನಗರದಲ್ಲಿ ಅಂಡರ್ವರ್ಲ್ಡ್ ಕಥೆ, ಫೈಟಿಂಗ್, ತ್ರಿಕೋನ ಪ್ರೇಮಕಥೆ, ಅಬ್ಬರದ ಸಂಗೀತಗಳ ಕಮರ್ಷಿಯಲ್ ಚಿತ್ರ ಬರುತ್ತಲೇ ಇವೆ. ಈಗ ಬಂದಿರುವ ಗುಲಾಮ ಕೂಡಾ ಅದೇ ಸಾಲಿಗೆ ಸೇರುತ್ತದೆ. ನಿರ್ದೇಶಕ ತುಷಾರ್ ರಂಗನಾಥ್ ಕಥೆಯ ಆಯ್ಕೆಯಲ್ಲಿ ಎಡವಿದ್ದಾರೆ. ಸಾಮಾನ್ಯವಾಗಿ ಅಂಡರ್ವರ್ಲ್ಡ್ ಚಿತ್ರ ಮಾಡುವಾಗ ಕಥೆ ಹಾಗೂ ಕ್ಯಾಮರಾ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಆದರೆ ಇಲ್ಲಿ ಆ ಯಾವುದೇ ಅಂಶ ಕಾಣುವುದಿಲ್ಲ. ಚಿತ್ರದ ನಿರೂಪಣೆಯಲ್ಲೂ ಎಡವಿದ್ದಾರೆ. ಚಿತ್ರದ ದೃಶ್ಯಗಳು ಜಾಳು ಜಾಳಾಗಿವೆ.ಪೊಲೀಸ್ ಕ್ವಾರ್ಟಸ್‌ನಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಪ್ರಜ್ವಲ್ ಪೊಲೀಸ್ ಕಮಿಷನರ್ ಕಾರ್ ಡ್ರೈವರ್ ಮಗ. ಮಹಾ ಸೊಂಬೇರಿ. ಅದೇ ಕಾಲೋನಿಯಲ್ಲಿರುವ ಪೊಲೀಸ್ ಪೇದೆ ಕಾಶಿ ಮಗಳು ಬಿಯಾಂಕಾಳನ್ನು ಪ್ರೀತಿಸುತ್ತಾನೆ. ಅವಳಿಗೆ ಇವನನ್ನು ಕಂಡರೆ ಇಷ್ಟವಿಲ್ಲ. ಮತ್ತೊಬ್ಬ ಹುಡುಗಿ ಸೋನುಗೆ ಇವನನ್ನು ಕಂಡರೆ ಇಷ್ಟ. ಹೀಗೆ ಅದೇ ಸಾಧಾರಣ ಕಥೆಯನ್ನು ಹಿಡಿದು ಇಡೀ ಚಿತ್ರವನ್ನು ಎಳೆದಾಡಿದ್ದಾರೆ.ಪೊಲೀಸ್ ಇಲಾಖೆಯ ಬಗ್ಗೆ ಸರಿಯಾಗಿ ಅಧ್ಯಯನ ಮಾಡದೇ ಸಿನಿಮಾ ಮಾಡಿರುವುದು ಎದ್ದು ಕಾಣುತ್ತದೆ. ಪೊಲೀಸ್ ಡ್ರೈವರ್ ರಂಗಾಯಣ ರಘುಗೆ ಮಗ ಪ್ರಜ್ವಲ್ ಮೂರು ರೌಡಿಗಳನ್ನು ಕೊಲೆ ಮಾಡಿದ ವಿಷಯವನ್ನು ಮತ್ತೊಬ್ಬ ಪೇದೆ ಹೇಳಿ ಹೀಯಾಳಿಸುವ ದೃಶ್ಯ ತುಂಬಾ ಬಾಲಿಶವಾಗಿ ಮೂಡಿಬಂದಿದೆ.ಚಿತ್ರದ ದೃಶ್ಯಗಳು ಪ್ರೇಕ್ಷಕರಿಗೆ ಮನಮುಟ್ಟುವುದಿಲ್ಲ. ಪ್ರಜ್ವಲ್ ಅಭಿನಯದಲ್ಲಿ ಗೆದ್ದಿದ್ದಾರೆ. ಖಳನಟನಾಗಿ ಅಭಿನಯಿಸಿದ ವಿಶ್ವ ಭರವಸೆ ಮೂಡಿಸಿದ್ದಾರೆ. ಬಿಯಾಂಕಾ ಹಾಗೂ ಸೋನು ನಟನೆ ಓಕೆ. ರಂಗಾಯಣ ರಘು ಪ್ರತಿ ಚಿತ್ರದಲ್ಲೂ ಒಂದೇ ರೀತಿ ಅಭಿನಯಿಸುವುದರಿಂದ ಅವರ ಬಗ್ಗೆ ಕಮೆಂಟ್ ಮಾಡುವ ಅಗತ್ಯವಿಲ್ಲ. ಗುರುಕಿರಣ್ ಸಂಗೀತ ಹದಗೆಟ್ಟಿದೆ.ಕ್ಯಾಮರಾ ಹಾಗೂ ಸಂಕಲನದ ಬಗ್ಗೆ ಮಾತನಾಡದಿರುವುದು ಉತ್ತಮ. ಒಟ್ಟಾರೆ ಚಿತ್ರ ಅದ್ವಾನವಾಗಿದೆ ಎಂದರೆ ನಿರ್ದೇಶಕರು ಬೇಸರ ಮಾಡಿಕೊಳ್ಳಬಾರದು.