ಚಿತ್ರ ವಿಮರ್ಶೆ ಚಿತ್ರ: ನಂದ ನಿರ್ದೇಶನ: ಅನಂತರಾಜು ತಾರಾಗಣ: ಶಿವರಾಜ್ಕುಮಾರ್, ಸಂಧ್ಯಾ, ಶರಣ್, ರಂಗಾಯಣ ರಘು ಕನ್ನಡ ಚಿತ್ರರಂಗ ಎಷ್ಟೇ ಮುಂದುವರಿದರೂ ಕೆಲವು ವಿಷಯಗಳಲ್ಲಿ ಮಾತ್ರ ನಿಂತ ನೀರಾಗಿಯೇ ಇರುತ್ತದೆ. ಒಂದೇ ರೀತಿಯ ಚಿತ್ರ ನೋಡಿ ಬೇಸತ್ತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬೆನ್ನು ಹಾಕಿ ಕುಳಿತರೂ ನಿರ್ಮಾಪಕರು ಮತ್ತೇ ಅದೇ ರೀತಿಯ ಚಿತ್ರಗಳನ್ನು ಮಾಡುತ್ತಾ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಜಿಗುಪ್ಸೆ ಹುಟ್ಟಿಸುತ್ತಿದ್ದಾರೆ. ಈ ವಾರ ತೆರೆಕಂಡ 'ನಂದ' ಚಿತ್ರ ಕೂಡಾ ಇದೇ ಸಾಲಿಗೆ ಸೇರುತ್ತದೆ.
MOKSHENDRA
ಅದೇ ಅಕ್ಕ-ತಮ್ಮನ ಸೆಂಟಿಮೆಂಟ್, ರೌಡಿಸಂ. ಬೇಡವೆಂದರೂ ಮತ್ತೆ ಸೆಳೆಯುವ ಅಂಡರ್ವಲ್ಡ್, ಕೊನೆಗೂ ಹಿಗ್ಗಾಮುಗ್ಗಾ ಕೊಚ್ಚುವ ನಾಯಕ, ಈ ನಡುವೆ ನಾಯಕನ ಬೆನ್ನ ಹಿಂದೆ ಬೀಳುವ ನಾಯಕಿ, ಒಂದಿಷ್ಟು ಕ್ಲೈಮ್ಯಾಕ್ಸ್.. ಇಂತಹ ಎಷ್ಟು ಚಿತ್ರಗಳು ಬಂದಿಲ್ಲ ನೀವೇ ಹೇಳಿ, ಅದರಲ್ಲೂ ಶಿವರಾಜ್ ಕುಮಾರ್ ಇಂತಹ ಹತ್ತಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ನಂದ ಚಿತ್ರ ನೋಡುವಾಗ ಯಾವುದೇ ರೀತಿಯ ಹೊಸ ಅನುಭವ ಆಗುವುದಿಲ್ಲ. ಶಿವರಾಜ್ಕುಮಾರ್ ನಟಿಸಿದ ಯಾವುದೋ ಒಂದು ಹಳೆಯ ಚಿತ್ರ ನೋಡಿದಂತಾಗುತ್ತದೆ. ಚಿತ್ರದಲ್ಲಿ ಸ್ವಲ್ಪವಾದರೂ ನೋಡುವಂತಿರುವ ಅಂಶವೆಂದರೆ ಅದು ಶರಣ್ ಕಾಮಿಡಿ. ಶರಣ್ ತಮ್ಮ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ. ಅವರ ಡೈಲಾಗ್ ಡೆಲಿವರಿ, ನಟನೆ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ.
ಚಿತ್ರದಲ್ಲಿ ನಾಯಕಿ ಸಂಧ್ಯಾಗೆ ಹೆಚ್ಚಿನ ಕೆಲಸವಿಲ್ಲ. ಈ ಪಾತ್ರಕ್ಕಾಗಿ ಅವರನ್ನು ತಮಿಳಿನಿಂದ ಕರೆ ತರುವ ಅಗತ್ಯವಿರಲಿಲ್ಲ. ಚಿತ್ರದ ನಿರ್ಮಾಪಕ ಮಾಹಿನ್ ತಾನು ನಾಯಕನ ಸಮಕ್ಕೆ ಕಾಣಿಸಿಕೊಳ್ಳಬೇಕೆಂದು ಅಂತಹ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ನಟನೆ ಅವರಿಂದ ಮಾರು ದೂರ. ಶರತ್ ಲೋಹಿತಾಶ್ವ ಅಭಿನಯ ಮತ್ತು ಮಾತಿನ ಶೈಲಿ ಇಷ್ಟವಾಗುತ್ತದೆ.
ಚಿತ್ರದ ಎರಡು ಹಾಡುಗಳು ಗುನುಗುವಂತಿದೆ. ಅರ್ಥವಾಗದ ಪ್ರಶ್ನೆ ಎಂದರೆ, ಶಿವರಾಜ್ಕುಮಾರ್ ಮತ್ತೆ ಮತ್ತೆ ಇದೇ ರೀತಿಯ ಕಥೆಯನ್ನೇ ಯಾಕೆ ಆಯ್ಕೆ ಮಾಡುತ್ತಾರೆಂಬುದು.