ಅಂದಹಾಗೆ 'ರಾಜಕುಮಾರಿ'ಯಂತೂ ಬಂದಿದ್ದಾಳೆ. ಆದರೆ ಹೊಸ 'ರಾಜಕುಮಾರಿ'ಯನ್ನು ನೋಡಲು ಕಾದಿದ್ದ ಪ್ರೇಕ್ಷಕರಿಗೆ ತಾವು ನಿರೀಕ್ಷಿಸಿದ 'ರಾಜಕುಮಾರಿ' ಸಿಕ್ಕಿಲ್ಲ. ಅದೇ ಹಳೇ 'ರಾಜಕುಮಾರಿ'. ಹಳೇ ಬಾಟಲಲ್ಲಿ ಹೊಸ ಮದ್ಯ ಸುರಿದು ಕೊಟ್ಟರೆ ಹೇಗಿರುತ್ತೆ ಹೇಳಿ? ಹಾಗೆಯೇ, ಹಳೆಯ ರಾಜಕುಮಾರಿಯೇ ಹೊಸ ಮುಖದ ರೂಪದಲ್ಲಿ ತೆರೆಯ ಮೇಲೆ ಬಂದಿದ್ದಾಳೆ ಅಷ್ಟೆ ಅಂತ ಹೇಳಲು ಯಾವುದೇ ಮುಲಾಜು ಬೇಕಿಲ್ಲ.
ಈಗಾಗಲೇ ಕನ್ನಡ ಪ್ರೇಕ್ಷಕ ಮಹಾಶಯ ಇಂತಹ ನೂರಾರು ರಾಜಕುಮಾರಿಗಳನ್ನು ವಾರ ವಾರ ನೋಡಿ ನೋಡಿ ರೋಸಿ ಹೋಗಿದ್ದಾನೆ. ಆದರೆ ನಿರ್ದೇಶಕ ಎಸ್.ಗೋವಿಂದ್ ಅವರು ನೋಡಿಲ್ಲವೋ ಏನೋ, ಗೊತ್ತಿಲ್ಲ. ಈ ವಾರ ಬಿಡುಗಡೆಯಾದ ರಾಜಕುಮಾರಿ ಚಿತ್ರದಲ್ಲಿ ಎಲ್ಲಿಯೂ ಯಾವ ಹೊಸತನವೂ ಕಾಣುವುದಿಲ್ಲ. ಇಂತಹ ಅನೇಕ ಚಿತ್ರಗಳು ಬಂದು ವಾರದೊಳಗಡೆ ಎತ್ತಂಗಡಿಯಾಗಿವೆ. ಮತ್ತೆ ಅಂತಹುದೇ ಚಿತ್ರವನ್ನು ನಿರ್ಮಿಸುವ ದರ್ದು ಏನಿತ್ತು ಎಂದು ಕೇಳುವ ಪ್ರೇಕ್ಷಕನಿಗೆ ಉತ್ತರ ಯಾರು ಕೊಡುತ್ತಾರೋ ಗೊತ್ತಿಲ್ಲ.
ರಾಜಕುಮಾರಿ ವಠಾರವೊಂದರಲ್ಲಿ ನಡೆಯುವ ಕಥೆ. ಇಬ್ಬರು ನಾಯಕಿರಿದ್ದ ಮೇಲೆ ಅದೊಂದು ತ್ರಿಕೋನ ಪ್ರೇಮ ಕಥೆಯ ಚಿತ್ರ ಎಂದು ಹೊಸತಾಗಿ ಹೇಳಬೇಕಾಗಿಲ್ಲ. ವಠಾರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್ ಎಲ್ಲರು ಇರುತ್ತಾರೆ. ಮೊದಲು ನಾಯಕನಿಗೆ ನಾಯಕಿ ಕೆನ್ನಗೆ ಬಾರಿಸುತ್ತಾಳೆ. ನಂತರ ನಿರೀಕ್ಷೆಯಂತೆ, ಯಾವುದೋ ಒಂದು ಸಂದರ್ಭದಲ್ಲಿ ನಾಯಕ ಫೈಟ್ ಮಾಡುವುದನ್ನು ಕಂಡು ಅವನನ್ನು ಲವ್ ಮಾಡಲು ನಿರ್ಧರಿಸುತ್ತಾಳೆ. ಇದು ಕಥಾಹಂದರ. ಆದರೆ ಇಲ್ಲಿ ಮತ್ತೆ ಏನಾಗುತ್ತದೆ ಎಂದು ಕಥೆ ನೋಡಿಯೇ ಆಗಬೇಕಿಲ್ಲ.
MOKSHENDRA
ಚಿತ್ರದಲ್ಲಿ ನಾಯಕಿ ಕನ್ನಿಕಾ ವಿಧವೆ ಎಂದು ಸ್ವಯಂ ಘೋಷಿಸಿಕೊಂಡು ಯಾವುದೇ ಮೇಕಪ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದರೂ, ಲಿಪ್‌ಸ್ಟಿಕ್ ಮಾತ್ರ ಎದ್ದು ಕಾಣುತ್ತಿತ್ತು. ಅಜ್ಜನ ಪಾತ್ರದ ಶ್ರೀನಿವಾಸಮೂರ್ತಿ ಅವರ ಮೀಸೆಯೂ ಹಾಗೆ. ಅಂಟಿಸಿದ್ದರಿಂದಲೋ ಏನೋ, ಈಗಲೋ, ಆಗಲೋ ಬಿದ್ದರೆ ಎಂದು ಪ್ರೇಕ್ಷಕನಿಗೇ ಭಯವಾಗಬಹುದು. ನಿರ್ದೇಶಕರು ಮೇಕಪ್ ಬಗ್ಗೆ ಗಮನ ಹರಿಸುವಲ್ಲಿಯೂ ವಿಫಲವಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ರವಿಚಂದ್ರನ್ ಇಂತಹ ಕಥೆಯೇ ಇಲ್ಲದ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಯಾಕೆ ಒಪ್ಪಿದರು ಎಂಬುದು ಆಶ್ಚರ್ಯ. ಬಹುಶಃ ತಮ್ಮ ಬಾಲಾಜಿಗಾಗಿರಬೇಕು. ಬಾಲಾಜಿಯ ನಟನೆ ಅಷ್ಟೇನೂ ಇಂಪ್ರೆಸ್ ಮಾಡುವುದಿಲ್ಲ. ನಾಯಕಿಯರಿಬ್ಬರು ನಿರ್ದೇಶಕರ ಕೈ ಗೊಂಬೆ. ಉಳಿದಂತೆ ರಂಗಾಯಣ ರಘು, ಬುಲೆಟ್ ಪ್ರಕಾಶ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ಮಾಪಕ ಮಂಜುಗೆ 2009 ಲಕ್ಕಿಯಂತೆ. ವರ್ಷದ ಅವರ ಮೊದಲ ಚಿತ್ರವೇ ಹೀಗಿದೆ. ಮುಂದೇನಾಗುತ್ತದೋ, ರಾಜಕುಮಾರಿಗೇ ಗೊತ್ತು!